ರಾಷ್ಟ್ರೀಯ ನಾಯಕರು ಮಧ್ಯಪ್ರವೇಶ ಮಾಡುವುದಿಲ್ಲ
ಬೆಂಗಳೂರು:ಸ್ವಹಿತಾಸಕ್ತಿ ಕಾರಣಗಳಿಗಾಗಿ ನಡೆಯುತ್ತಿರುವ ಒಳಜಗಳದಲ್ಲಿ ರಾಷ್ಟ್ರೀಯ ನಾಯಕರ ಮಧ್ಯಪ್ರವೇಶ ಇಲ್ಲ, ಸಮಸ್ಯೆಗಳನ್ನು ನೀವೇ ಸರಿಪಡಿಸಿಕೊಳ್ಳಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮುಖಂಡರು, ರಾಜ್ಯ ನಾಯಕತ್ವದ ವಿರುದ್ಧ ಬಂಡಾಯವೆದ್ದು ಬೀದಿಗಿಳಿದಿರುವ ಕುರಿತು ಪ್ರಸ್ತಾಪಿಸಿದಾಗ, ಅಗರ್‌ವಾಲ್ ಈ ಮಾತು ಹೇಳಿದ್ದಾರೆ.
ವೈಯಕ್ತಿಕ ಪ್ರತಿಷ್ಠೆ ಹೋರಾಟ
ನಾಯಕರು ವೈಯಕ್ತಿಕ ಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿರುವಂತಿದೆ, ಇವರ ಈ ಕೃತ್ಯದಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು, ಇದನ್ನು ನಿಮ್ಮಲ್ಲಿಯೇ ಸರಿಪಡಿಸಿಕೊಳ್ಳಬೇಕು ನಾವು ಮಧ್ಯೆಪ್ರವೇಶಿಸುವುದಿಲ್ಲ.
ಬಂಡಾಯ ಎದ್ದಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಪರವಾಗಲಿ, ರಾಜ್ಯಾಧ್ಯಕ್ಷರ ಪರವಾಗಲಿ ನಾವಿಲ್ಲ, ನಮ್ಮದು ಪಕ್ಷ ಸಂಘಟನೆಯಷ್ಟೇ, ಇದಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ, ಈಗ ನಡೆಯುತ್ತಿರುವ ಒಳ ಸಂಘರ್ಷದಿಂದ ಪಕ್ಷಕ್ಕೆ ಯಾವ ಹಾನಿಯೂ ಆಗದು, ನಾವು ಈ ವಿಷಯದಲ್ಲಿ ತಟಸ್ಥ ಎಂದಿದ್ದಾರೆ.
ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಬಿ.ಶ್ರೀರಾಮುಲು ಅವರಿಗಳು ಕೆಲವು ನೇಮಕಾತಿ ವಿಚಾರದಲ್ಲಿ ಅಪಸ್ವರ ಎತ್ತಿದ್ದಲ್ಲದೆ, ಮಾತಿನ ಚಕಮಕಿಯೂ ಸಭೆಯಲ್ಲಿ ನಡೆದಿದೆ.
ಶಿಫಾರಸು ಕಡೆಗಣನೆ
ನಾವು ಮಾಡಿದ ಶಿಫಾರಸ್ಸನ್ನು ಕಡೆಗಣಿಸಿ ಬೇರೆಯವರನ್ನು ನೇಮಕ ಮಾಡಿದ್ದೀರಿ, ಇದು ಸರಿಯಲ್ಲ ಎಂದು ರಾಜ್ಯಾಧ್ಯಕ್ಷರಿಗೆ ಈ ಮುಖಂಡರು ಸಭೆಯಲ್ಲೇ ತಿಳಿಸಿದರು.
ಜಿಲ್ಲಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಭಾರೀ ಚರ್ಚೆ ನಂತರ ಮಧ್ಯೆ ಪ್ರವೇಶಿಸಿದ ಅಗರ್‌ವಾಲ್, ಪ್ರತಿ ಜಿಲ್ಲೆಗೆ ಮೂವರ ಹೆಸರುಗಳನ್ನು ರಾಜ್ಯ ಘಟಕದಿಂದ ಶಿಫಾರಸು ಮಾಡಿ.
ಪಕ್ಷ ನೀವು ಮಾಡಿದ ಶಿಫಾರಸ್ಸಿನಲ್ಲಿ ಒಬ್ಬರನ್ನು ನೇಮಕ ಮಾಡುತ್ತದೆ, ಇದಕ್ಕೂ ರಾಜ್ಯಾಧ್ಯಕ್ಷರ ಚುನಾವಣೆಗೂ ಸಂಬಂಧವಿಲ್ಲ.
ರಾಜ್ಯಾಧ್ಯಕ್ಷರ ಚುನಾವಣೆ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆಯಲಿದೆ ಎಂದರು.