ಮುಡಾ 14 ಬಿಡಿ ನಿವೇಶನಗಳ ಹಂಚಿಕೆ ಪ್ರಕರಣ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ಬಿಡಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಪಾತ್ರ ಇಲ್ಲ ಎಂದಿರುವ ಲೋಕಾಯುಕ್ತ, ಮೂಡಾ ಅಧಿಕಾರಿಗಳ ಲೋಪಕ್ಕೆ ಕ್ರಿಮಿನಲ್ ದಾವೆ ಹೂಡಬೇಕೆ, ಬೇಡವೇ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಕೇಳಿದೆ.
ನ್ಯಾಯಾಲಯದ ಆದೇಶದಂತೆ ಬಿಡಿ ನಿವೇಶನಗಳ ಹಂಚಿಕೆ ಕುರಿತು ತನಿಖೆ ನಡೆಸಿರುವ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್, ತನಿಖೆಯ ಬಹುಭಾಗ ಪೂರ್ಣಗೊಳಿಸಿ ಐಜಿ ಸುಬ್ರಹ್ಮಣ್ಯೇಶ್ವರ್ ರಾವ್ ಅವರಿಗೆ ವರದಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಅವರ ಕುಟುಂಬ ನಿವೇಶನಗಳನ್ನು ಪಡೆದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಸಂಬಂಧ ರಾಜ್ಯ ಹೈಕೋರ್ಟ್‌ನಲ್ಲಿ ಮುಂದುವರೆದ ವಿಚಾರಣೆ ಜನವರಿ 27 ರಂದು ಬರಲಿದೆ.
ಇಲ್ಲಿಯವರೆಗೆ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಪೀಠ ಆದೇಶ ಮಾಡಿತ್ತು.
ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಅವರು, ಇಲ್ಲಿಯವರೆಗಿನ ತನಿಖಾ ವರದಿಯನ್ನು ಕೇಂದ್ರ ಕಚೇರಿಗೆ ತಲುಪಿಸಿದ್ದಾರೆ.
ಉನ್ನತ ಮೂಲಗಳ ಪ್ರಕಾರ 14 ಬಿಡಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ, ಅವರ ಪತ್ನಿ ಪಾರ್ವತಿ ಅವರಾಗಲೀ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ್ದಾರಂತೆ.
ನಿವೇಶನಗಳ ಹಂಚಿಕೆಯಲ್ಲಿ ಮುಡಾ ಅಧಿಕಾರಿಗಳು ಪ್ರಾಧಿಕಾರದ ನಿಯಮಾವಳಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಿನಲ್ ದಾವೆ ಹೂಡಬೇಕೆ, ಇಲ್ಲವೇ, ಇಲಾಖಾ ತನಿಖೆ ನಡೆಸಬೇಕೆ ಅಥವಾ ಕಣ್ತಪ್ಪಿನಿಂದ ಇದಾಗಿದೆಯೇ, ನಾವು ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಕಾನೂನು ವಿಭಾಗವನ್ನು ತನಿಖಾಧಿಕಾರಿಗಳು ಕೋರಿದ್ದಾರೆ.
ಕಾನೂನು ವಿಭಾಗ ನೀಡುವ ಸಲಹೆ ಆಧರಿಸಿ, ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಲೋಕಾಯುಕ್ತ ಪೋಲಿಸರು ತೀರ್ಮಾನಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಅವರು ಈ ಹಿಂದೆ ನೀಡಿದ್ದ ಸ್ಟೇಟಸ್ ರಿಪೋರ್ಟ್ ಹಾಗೂ ಈಗ ಸಲ್ಲಿಸಿರುವ ವರದಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿರುವುದಕ್ಕೆ ಎಲ್ಲಿಯೂ ದಾಖಲೆಗಳಿಲ್ಲ, ಅವರ ಪಾತ್ರ ಇದೆ ಎಂಬುದು ಎಲ್ಲಿಯೂ ತನಿಖೆಯಿಂದ ಕಂಡುಬಂದಿಲ್ಲ ಎಂದು ಉಲ್ಲೇಖಿಸಿದ್ದಾರೆ.
ನಿವೇಶನ ಹಂಚಿಕೆ ಪ್ರಕರಣವನ್ನು ಮೂರು ಭಾಗಗಳಾಗಿ ವಿಂಗಡಿಸಿ ತನಿಖೆ ನಡೆಸಲಾಗಿದೆ.
ವಿವಾದಿತ ಜಮೀನು ಡಿ-ನೋಟಿಫೈಗೆ ಮೊದಲು ದೇವರಾಜು ತಂದೆಯಿಂದ ದೇವರಾಜು ಸಹೋದರನಿಗೆ ನಂತರ ದೇವರಾಜುಗೆ ಬಂದಿತ್ತು. ಆದರೆ, ಜಮೀನುಗಳನ್ನು ಕುಟುಂಬಸ್ಥರೇ ವರ್ಗಾವಣೆ ಮಾಡಿಕೊಂಡಿದ್ದರು. ಜಮೀನು ಮಾಲೀಕತ್ವ ವರ್ಗಾವಣೆ ಬಗ್ಗೆ ಸರ್ಕಾರಿ ದಾಖಲೆಯಲ್ಲಿ ನಮೂದಿಸದೇ ಇರುವುದು ಅವರ ಕುಟುಂಬಸ್ಥರು ಮಾಡಿದ್ದ ನಿರ್ಲಕ್ಷ್ಯ ಎಂಬ ಮಾಹಿತಿ ನೀಡಿದ್ದಾರೆ.
ದೇವರಾಜು ತನಗೆ ಬಂದ ಕೃಷಿ ಭೂಮಿಯನ್ನು ಮಲ್ಲಿಕಾರ್ಜುನಸ್ವಾಮಿ ಎಂಬುವರಿಗೆ ಮಾರಾಟ ಮಾಡಿದ್ದರು. ಅವರು ಜಮೀನನ್ನು ಭೂಪರಿವರ್ತನೆ ಮಾಡಿಸಿಕೊಂಡಿರುತ್ತಾರೆ.
ಮುಡಾ ಹಾಗೂ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಭೂಪರಿವರ್ತನೆ ಬಗ್ಗೆ ಸರಿಯಾದ ಪರಿಶೀಲನೆ ಮಾಡಿಲ್ಲ. ಪರಿಶೀಲನೆ ನಡೆಸದೇ ಭೂಪರಿವರ್ತನೆ ಮಾಡಿದ್ದಾರೆ.
ಭೂಪರಿವರ್ತನೆಯಲ್ಲಿ ಮುಖ್ಯಮಂತ್ರಿ ಕುಟುಂಬ ಹಸ್ತಕ್ಷೇಪವಿಲ್ಲ ಅನ್ನೋದು ಸ್ಪಷ್ಟವಾಗಿದೆ. ಮಲ್ಲಿಕಾರ್ಜುನಸ್ವಾಮಿ ಮಾರಾಟ ಮಾಡಿದ ಮೇಲೆ ಅವರ ಕುಟುಂಬಕ್ಕೆ ಭೂಮಿ ಬಂತು.
ಮೈಸೂರು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ 50:50ರ ಅನುಪಾತದಲ್ಲಿ 14 ಬಿಡಿ ನಿವೇಶನಗಳನ್ನು ಮುಖ್ಯಮಂತ್ರಿ ಅವರ ಕುಟುಂಬಕ್ಕೆ ನೀಡಿ ಮುಡಾ ಅಧಿಕಾರಿಗಳು ತಪ್ಪು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇಂತಹ ಅಧಿಕಾರಿಗಳ ವಿರುದ್ಧ ಯಾವ ರೀತಿ ಕಾನೂನು ಕ್ರಮ ಜರುಗಿಸಬೇಕೆಂದು ಇಲಾಖಾ ಮೊರೆ ಹೋಗಿದ್ದಾರೆ.