ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ
ಬೆಂಗಳೂರು : ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಸಾಲ ಪಡೆದವರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಅಧಿಕಾರಿಗಳ ಉನ್ನತಮಟ್ಟದ ಸಭೆ ಕರೆದಿದ್ದಾರೆ.
ರಾಜ್ಯಾದ್ಯಂತ ಮೈಕ್ರೊ ಫೈನಾನ್ಸ್‌ನವರ ಹಾವಳಿಯಿಂದ ಕೆಲವು ಕುಟುಂಬಗಳು ಗ್ರಾಮವನ್ನೇ ತೊರೆದರೆ, ಮತ್ತೆ ಕೆಲವರು ಇವರ ಗೂಂಡಾ ವರ್ತನೆ ಹಾಗೂ ಅಪಮಾನ ಸಹಿಸಿಕೊಳ್ಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಕಿರುಕುಳ ನೀಡಿದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಸ್ವತಃ ಮುಖ್ಯಮಂತ್ರಿ ಅವರೇ ಪೋಲಿಸ್ ಅಧಿಕಾರಿಗಳಿಗೆ ಆದೇಶ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಮೀಟರ್ ಬಡ್ಡಿ ಧಂಧೆಕೋರರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತಮಟ್ಟದ ಸಭೆ ಕರೆದಿದ್ದಾರೆ.
ಹಣಕಾಸು, ಕಂದಾಯ, ಗೃಹ, ಕಾನೂನು ಹಾಗೂ ಸಹಕಾರ ಇಲಾಖೆ ಸಚಿವರು, ಕಾರ್ಯದರ್ಶಿಗಳು ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
ಸಾಲ ಪಡೆದವರು ಬಡ್ಡಿ ಕಟ್ಟಲಾಗದ್ದರಿಂದ ಪೈನಾನ್ಸ್ ಕಂಪನಿಗಳು ಅವರ ಮನೆ ಮತ್ತು ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಬೀದಿಗೆ ತಳ್ಳಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಅಸಲು, ಬಡ್ಡಿ ತೆರಲಾಗದವರು ಇವರ ಹಾವಳಿಯಿಂದ ದಿನನಿತ್ಯ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ, ಇಷ್ಟಾದರೂ ಪೋಲಿಸ್ ಇಲಾಖೆ ಯಾವುದೇ ಬಿಗಿ ಕ್ರಮ ತೆಗೆದುಕೊಂಡಿಲ್ಲ.
ಮೈಕ್ರೊ ಫೈನಾನ್ಸ್ ಸಂಸ್ಥೆಗಳ ದುರಾಡಳಿತ ಹತ್ತಿಕ್ಕಲು ಸದ್ಯ ಇರುವ ಕಾನೂನು ಪರಿಣಾಮಕಾರಿಯಾಗಿ ಇಲ್ಲದಿರುವುದು, ಪೋಲಿಸರು ಕಠಿಣ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಕೈಚೆಲ್ಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಎಂಎಫ್‌ಐಗಳ ಕಿರುಕುಳ ದೂರುಗಳು ಬಂದಿವೆ, ಸದ್ಯದ ಕಾನೂನು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ, ಆದ್ದರಿಂದ ಕಠಿಣ ಕಾನೂನು ಜಾರಿಗೆ ಸರ್ಕಾರ ನಾಳೆ ತೀರ್ಮಾನ ಕೈಗೊಳ್ಳಲಿದೆ ಎಂದರು.
ಬ್ಯಾಂಕಿಂಗ್ ನಿಯಮಾವಳಿ ಪ್ರಕಾರ ಸಾಲ ವಸೂಲಾತಿ ಹಾಗೂ ಸಾಲ ಪಡೆದವರ ರಕ್ಷಣೆಗೆ ಕಾನೂನು ಇದೆ, ಆದರೆ, ಮೈಕ್ರೊ ಫೈನಾನ್ಸ್ ಸಂಸ್ಥೆಗಳನ್ನು ಎದುರಿಸಲು ಸದ್ಯದ ಕಾನೂನುಗಳು ಪರಿಣಾಮಕಾರಿಯಾಗಿಲ್ಲ, ಆದ್ದರಿಂದ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಸಾಧ್ಯವಾಗಿಲ್ಲ ಎಂದರು.
ಗ್ರಾಹಕರು ಸಾಲ ಪಡೆಯುವ ಸಂದಿಗ್ಧತೆಯಲ್ಲಿ ಕಂಪನಿಗಳ ಷರತ್ತುಗಳಿಗೆ ತಿಳಿದೋ, ತಿಳಿಯದೆಯೋ ಸಹಿಗಳನ್ನು ಹಾಕಿರುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡು ಕಂಪನಿಗಳು ಸಾಲ ಮತ್ತು ಬಡ್ಡಿ ತೀರಿಸದ ಗ್ರಾಹಕರ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದರು.