ಬೆಂಗಳೂರು:ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆಸ್ಪತ್ರೆ ಡಾ.ವಿಂಚಿ ರೋಬೊಟಿಕ್ ತಂತ್ರಜ್ಞಾನ ಮೂಲಕ ಕಳೆದ 9 ವರ್ಷಗಳಲ್ಲಿ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಪೂರೈಸಿ ಇತಿಹಾಸ ನಿರ್ಮಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಂಪೂರ್ಣ ಉಚಿತ ಹಾಗೂ ಕೈಗೆಟುಕುವ ಬೆಲೆಯಲ್ಲಿ ವಿಶ್ವ ದರ್ಜೆಯ ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ.
ವಿಶ್ವಮಟ್ಟದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ
ರೋಗಿಗಳ ಆರೈಕೆಯಲ್ಲಿ ಕಿದ್ವಾಯಿ ಸಂಸ್ಥೆ ಮುಂಚೂಣಿಯಲ್ಲಿದೆ, ಅಲ್ಲದೇ, ವಿಶ್ವಮಟ್ಟದಲ್ಲಿ ಹಾಗೂ ಭಾರತದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಅತ್ಯಾಧುನಿಕ ಡಾ.ವಿಂಚಿ ರೋಬೊಟಿಕ್ ತಂತ್ರಜ್ಞಾನದೊಂದಿಗೆ ಯಶಸ್ವಿಯಾಗಿ ಒಂದು ಸಾವಿರ ಶಸ್ತ್ರಚಿಕಿತ್ಸೆ ಪೂರೈಸಿದ ಸರ್ಕಾರಿ ಸಂಸ್ಥೆಗಳ ಪೈಕಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ಏಕೈಕ ಆಸ್ಪತ್ರೆಯಾಗಿದೆ ಎಂದಿದ್ದಾರೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಗೂ ಒಳರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಿದ ಏಕೈಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಗೌರವಕ್ಕೂ ಕಿದ್ವಾಯಿ ಸಂಸ್ಥೆ ಪಾತ್ರವಾಗಿದೆ.
ಬೋನ್ ಮ್ಯಾರೋ ಘಟಕ
ರಾಜ್ಯದಲ್ಲೇ ಏಕೈಕ ಬೋನ್ ಮ್ಯಾರೋ (ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ) ಘಟಕ ಕಿದ್ವಾಯಿಯಲ್ಲಿದ್ದು, ಅಲೋಜೆನಿಕ್, ಆಟೋಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆಗಳು ಯಶಸ್ವಿಯಾಗಿವೆ.
ಕಿದ್ವಾಯಿ ಸಂಸ್ಥೆಯಲ್ಲಿ ಕೆಸಿಡಿಎಫ್ ಔಷಧ ಮಳಿಗೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ, ಕೆಎಸ್‌ಆರ್‌ಟಿಸಿ ನೌಕರರಿಗೆ ಕ್ಯಾಷ್‌ಲೆಸ್ ಚಿಕಿತ್ಸೆ ಸೌಲಭ್ಯವಿದೆ, ಬಿಪಿಎಲ್ ಪಡಿತರ ಚೀಟಿ ಇಲ್ಲದ ಹಾಗೂ ಹಣದ ಸಮಸ್ಯೆ ಇರುವ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ.
ಡಾ.ವಿಂಚಿ ಎಕ್ಸ್‌ಐ ಯಂತ್ರದಲ್ಲಿ ಸರ್ಜನ್ ಕನ್ಸೋಲ್, ಪೇಷಂಟ್ ಕಾರ್ಟ್, ವಿಷನ್ ಕಾರ್ಟ್ ವಿಭಾಗಗಳಿದ್ದು, ಪೇಷೆಂಟ್ ಕಾರ್ಟ್ ಯಂತ್ರ ಬಳಸಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
ಶಸ್ತ್ರ ಚಿಕಿತ್ಸೆಯ ಪ್ರತಿಯೊಂದು ಮಾಹಿತಿ ವಿಷನ್ ಕಾರ್ಟ್‌ನಲ್ಲಿ ದಾಖಲಾಗಿ ಎಲ್‌ಇಡಿ ಪರದೆಯಲ್ಲಿ ಕಾಣಿಸುತ್ತದೆ ಎಂದಿದ್ದಾರೆ.