ಆರ್‌ಬಿಐ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು:ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮ ಗಾಳಿಗೆ ತೂರಿ ಸಾಲಗಾರರಿಂದ ಅಸಲು, ಬಡ್ಡಿ ವಸೂಲು ಮಾಡುವ ಮೈಕ್ರೊ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ಹೊಸ ಕಠಿಣ ಕಾನೂನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಮುಂಬರುವ ಬಜೆಟ್ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡಿಸಿ ಅಂಗೀಕಾರ ಪಡೆದು ಕಾನೂನು ರೂಪಿಸಲಾಗುವುದು, ಅದಕ್ಕೂ ಮುನ್ನವೇ ಸುಗ್ರೀವಾಜ್ಞೆ ಮೂಲಕ ಮೈಕ್ರೊ ಫೈನಾನ್ಸ್ ವಸೂಲಿ ಹಾವಳಿಗೆ ಕಡಿವಾಣ ಹಾಕಲಾಗುವುದು, ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುವವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.
ಗೂಂಡಾಗಳ ಬಳಕೆ ಇಲ್ಲ
ಇನ್ನು ಮುಂದೆ ರೌಡಿ, ಗೂಂಡಾಗಳ ಮೂಲಕ ಸಾಲ ವಸೂಲಿ ಮಾಡುವಂತಿಲ್ಲ, ಸಂಜೆ 5ರ ನಂತರ ಸಾಲ ವಸೂಲಿಗೆ ಹೋಗುವಂತಿಲ್ಲ, ವಸೂಲಿ ಮಾಡುವಾಗ ಯಾವುದೇ ರೀತಿಯ ಕಿರುಕುಳ ನೀಡಬಾರದು.
ರಾಜ್ಯಾದ್ಯಂತ ದಾಖಲಾಗಿರುವ ಪ್ರಕರಣಗಳ ಬಗ್ಗೆ ಕೂಡಲೇ ಕ್ರಮ, ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಬೇಕು, ಸಾಲಗಾರರಿಗೆ ಕಿರುಕುಳ ಕೊಟ್ಟವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಭೆಯಲ್ಲಿದ್ದ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಕಟ್ಟಾದೇಶ ಮಾಡಲಾಗಿದೆ.
ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚಿಸಿದ್ದು, ದೂರು ನೀಡಬಹುದಾಗಿದೆ, ಅಲ್ಲದೆ, ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದರೆ ಸ್ವಯಂಪ್ರೇರಿತರಾಗಿ ದೂರು ದಾಖಲಿಸಲು ತಿಳಿಸಲಾಗಿದೆ.
ಕ್ರಿಮಿನಲ್ ಮೊಕದ್ದಮೆ
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲವಂತದ ಸಾಲ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಮಾಡಲಾಗುವುದು ಎಂದರು.
ಈಗಿರುವ ಕಾನೂನು ಇನ್ನಷ್ಟು ಬಲಪಡಿಸಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಹಾಗೂ ನೋಂದಣಿಯಾಗದ ಲೇವಾದೇವಿಗಾರರ ಮೇಲೆ ನಿಯಂತ್ರಣಕ್ಕೆ ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುವುದು.
ಒಂದು ಕುಟುಂಬಕ್ಕೆ ಎಷ್ಟು ಸಾಲ ನೀಡಬಹುದು ಎಂಬ ಬಗ್ಗೆ ಆರ್‌ಬಿಐ ಮಾರ್ಗಸೂಚಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು, ಅಲ್ಲದೆ, ಇದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಸರ್ಕಾರಕ್ಕೂ ಒತ್ತಾಯ
ಅಕ್ರಮ ಲೇವಾದೇವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದ್ದು, ಈ ಕುರಿತು ಸಮಗ್ರ ಸಮಾಲೋಚನೆ ನಡೆಸಿ, ಸಾಲದ ಸುಳಿಯಲ್ಲಿ ಸಿಲುಕಿದವರ ಹಿತ ಕಾಪಾಡಲು ಹಾಗೂ ಕಿರುಕುಳ ತಪ್ಪಿಸಲು ಸೂಕ್ತ ಕಾನೂನು ರಚಿಸಲು ಕೇಂದ್ರವನ್ನು ಒತ್ತಾಯಿಸಲಾಗುವುದು.
ಸರ್ಕಾರದ ಎಚ್ಚರಿಕೆ ನೀಡಿದ ನಂತರವೂ ಕಂಪನಿಗಳು ಸಾಲ ಪಡೆದವರಿಗೆ ಶೋಷಣೆ ಮಾಡಲು ಮುಂದಾದರೆ ಅಂತಹವರು ಸ್ಥಳೀಯ ಪೋಲಿಸ್ ಠಾಣೆ ಇಲ್ಲವೇ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಲಹೆ ಮಾಡಿದ್ದಾರೆ.
ಶೋಷಣೆ ನಡೆಸಿದ ಕುರಿತು ಮಾಹಿತಿ ದೊರೆತರೆ ಪೋಲಿಸರೇ ಸ್ವಯಂ ಪ್ರೇರಿತವಾಗಿ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಬಡ್ಡಿ ವಸೂಲಿಗೆ ಆರ್‌ಬಿಐ ನಿಯಮಾವಳಿ
ಆರ್‌ಬಿಐ ನಿಯಮಾವಳಿಯಂತೆ ಶೇಕಡ 17.07ಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡುವಂತಿಲ್ಲ, ಆದರೆ, ಪ್ರಸ್ತುತ ಶೇ.28ರಿಂದ ಶೇ.29ರಷ್ಟು ವಸೂಲಿ ಮಾಡುತ್ತಿರುವ ಮಾಹಿತಿಗಳಿವೆ.
ಇನ್ನು ಮುಂದೆ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಅನಧಿಕೃತ ವ್ಯವಹಾರ ನಡೆಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕಾನೂನು, ಗೃಹ, ಹಣಕಾಸು, ಕಂದಾಯ ಇಲಾಖೆ ಸೇರಿ ಮಾರ್ಗಸೂಚಿ ರೂಪಿಸಲಾಗುವುದು, ಅಲ್ಲದೆ, ನೆರೆ ರಾಜ್ಯಗಳಲ್ಲಿ ಸಾಲಗಾರರ ಕಿರುಕುಳ ತಪ್ಪಿಸುವ ಕುರಿತು ಇರುವ ಕಾನೂನುಗಳನ್ನು ಪರಿಶೀಲಿಸಿ ಹೊಸ ಕಾನೂನು ಜಾರಿಗೆ ತರಲಾಗುವುದು.
ಮೈಕ್ರೋಫೈನಾನ್ಸ್ ಅಸೋಸಿಯೇಷನ್ ಹಾಗೂ ಆರ್‌ಬಿಐ ಅಧಿಕಾರಿಗಳ ಅಭಿಪ್ರಾಯ ಕೇಳಲಾಗಿದೆ, ಯಾರಿಗೂ ಸಾಲ ಕೊಡಬೇಡಿ ಎಂಬುದಾಗಿ ನಾವು ಹೇಳುವುದಿಲ್ಲ, ಆದರೆ ವಸೂಲಿ ವೇಳೆ ಕಿರುಕುಳ ಕೊಡಲೇಬಾರದು, ಆರ್‌ಬಿಐ ನಿಯಮದಂತೆ ನಡೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸೂಚಿಸಿದರು.