ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬಿಡಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಬ್ಬರಿಗೂ ನೋಟಿಸ್ ನೀಡುವುದಲ್ಲದೆ, ಇದೇ 28ರ ಮಧ್ಯಾನ್ಹ 3 ಗಂಟೆಗೆ ಖುದ್ದು ಹಾಜರಾಗುವಂತೆ ಇ.ಡಿ. ಸೂಚಿಸಿದೆ.
ಪ್ರಕರಣದ ತನಿಖಾಧಿಕಾರಿ ಮುರಳಿಕೃಷ್ಣ ಅವರು ಜನವರಿ 24ರಂದು ಪಾರ್ವತಿ ಹಾಗೂ ಸುರೇಶ್ ಅವರಿಗೆ ನೋಟಿಸ್ ನೀಡಿದ್ದಾರೆ.
ಆರೋಪಿಗಳು ಕೋರ್ಟ್ ಮೆಟ್ಟಿಲು
ನೋಟಿಸ್ ಪ್ರಶ್ನಿಸಿ ಇಬ್ಬರು ಆರೋಪಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪಾರ್ವತಿ ಅವರಿಗೆ ಜನವರಿ 3ರಂದು ಇ.ಡಿ. ನೋಟಿಸ್ ನೀಡಿ, ಜನವರಿ 9ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಇದಕ್ಕೆ ತಮ್ಮ ವಕೀಲರ ಮೂಲಕ ಉತ್ತರ ನೀಡಲು 15 ದಿನಗಳ ಕಾಲಾವಕಾಶ ಕೋರಿದ್ದರು.
ಹದಿನೈದು ದಿನಗಳ ಕಾಲಾವಕಾಶ ಮುಗಿಯುತ್ತಿದ್ದಂತೆ ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿ, ತಮಗೆ ವಯಸ್ಸಾಗಿದ್ದು, ತಾವು ನಮ್ಮ ಮನಗೇ ಬಂದು ವಿಚಾರಣೆ ನಡೆಸಬಹುದು ಎಂದು ಕೋರಿದ್ದರು.
24ರಂದು ಖುದ್ದು ಹಾಜರಿಗೆ ಆದೇಶ
ಮನವಿಗೆ ಸ್ಪಂದಿಸದ ಇ.ಡಿ. 24ರಂದು ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ಆದೇಶ ಮಾಡಿತು.
ಸಚಿವ ಭೈರತಿ ಸುರೇಶ್ ಸವರಿಗೂ ಇದು ಎರಡನೇ ನೋಟಿಸ್ ಆಗಿದೆ.
ನಿಯಮಾವಳಿಗಳನ್ನು ಗಾಳಿಗೆ 50:50ರ ಅನುಪಾತದಲ್ಲಿ ಪ್ರಾಧಿಕಾರ ನಿವೇಶನಗಳನ್ನು ಪಾರ್ವತಿ ಅವರಿಗೆ ಹಂಚಿಕೆ ಮಾಡಿತ್ತು ಎಂದು ಆರೋಪಿಸಲಾಗಿದೆ.
ಈ 14 ನಿವೇಶನಗಳನ್ನು ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪಡೆದುಕೊಂಡಿದ್ದರು, ಇದರಿಂದ ಪ್ರಾಧಿಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟು ಮಾಡಿದೆ.
ಒತ್ತಡಕ್ಕೆ ಮಣಿದು ಬಿಡಿ ನಿವೇಶನ
ಅಧಿಕಾರಿಗಳು, ಕಾಣದ ಕೈಗಳ ಒತ್ತಡಕ್ಕೆ ಮಣಿದು ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರಿಂದ 58 ಕೋಟಿ ರೂ.ನಷ್ಟು ನಷ್ಟ ಆಗಿದೆ.
ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ಪ್ರಾಧಿಕಾರ ಸಾವಿರಾರು ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಅಕ್ರಮ ಹಣ ವರ್ಗಾವಣೆ ಆಗಿದೆ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಇ.ಡಿ. ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದಿದ್ದಲ್ಲದೆ, ಇದುವರೆಗೆ ಮುಡಾದ ಹಿಂದಿನ ಇಬ್ಬರು ಆಯುಕ್ತರು ಹಾಗೂ ಅಧಿಕಾರಿಗಳು ಅಲ್ಲದೆ, ಡೆವಲಪರ‍್ಸ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು.
ಪ್ರಕರಣಕ್ಕೆ ಸಂಬಂಧಸಿದಂತೆ 80ಕ್ಕೂ ಹೆಚ್ಚು ಅಧಿಕಾರಿಗಳು, ಡೆವಲಪರ‍್ಸ್ ಮತ್ತು ಮಧ್ಯವರ್ತಿಗಳನ್ನು ಇ.ಡಿ. ವಿಚಾರಣೆಗೆ ಒಳಪಡಿಸಿ, ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತಕ್ಕೂ ಮಾಹಿತಿ ನೀಡಿತ್ತು.
ಜಾಲತಾಣದಲ್ಲಿ ವಿಷಯ ಬಹಿರಂಗ
ಇತ್ತೀಚೆಗೆ ತನ್ನ ಜಾಲತಾಣ ಖಾತೆಯಲ್ಲಿ ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಪಾಲುದಾರರ ಕುರಿತು ವಿಷಯ ಬಹಿರಂಗ ಪಡಿಸಿತ್ತು.
ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ವೇಳೆಯಲ್ಲೇ ಮುಡಾದಲ್ಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಇ.ಡಿ. ಪದೇ ಪದೇ ಮಾಹಿತಿ ಬಹಿರಂಗ ಪಡಿಸಿತ್ತು.
ಇದರ ಬೆನ್ನಲ್ಲೇ ಪ್ರಮುಖ ಆರೋಪಿಗಳಾದ ಪಾರ್ವತಿ ಹಾಗೂ ಭೈರತಿ ಸುರೇಶ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.