ವೈಜಾಗ್ ಸ್ಟೀಲ್ ಕಾರ್ಖಾನೆ ಪುನಃಶ್ಚೇತನಕ್ಕೆ 11,400 ಕೋಟಿ ರೂ. ಪ್ಯಾಕೇಜ್
ವಿಶಾಖಪಟ್ಟಣ:ಭಾರತದಲ್ಲಿ 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೃಢ ಸಂಕಲ್ಪದ ಆಶಯದಂತೆ ಆಂಧ್ರ ಪ್ರದೇಶದ ವೈಜಾಗ್ ಸ್ಟೀಲ್ ಕಾರ್ಖಾನೆ ಪುನಃಶ್ಚೇತನಕ್ಕೆ 11,400 ಕೋಟಿ ರೂ. ಬೃಹತ್ ಪ್ಯಾಕೇಜ್ ಘೋಷಿಸಲಾಗಿದೆ, ಇದರಿಂದ ಬಹುತೇಕ ಖಾಸಗೀಕರಣದ ಹೊಸ್ತಿಲಲ್ಲಿದ್ದ ಕಾರ್ಖಾನೆಗೆ ಮರು ಜೀವ ಸಿಗಲಿದೆ ಎಂದರು.
ವೈಜಾಗ್ ಸ್ಟೀಲ್ ಕಾರ್ಖಾನೆಗೆ ಬೃಹತ್ ಪ್ಯಾಕೇಜ್ ಘೋಷಣೆ ನಂತರ ತಿರುಪತಿಗೆ ಕುಟುಂಬ ಸಮೇತ ತೆರಳಿ ವೆಂಕಟೇಶ್ವರಸ್ವಾಮಿ ದರ್ಶನ ನಂತರ ಆಗಮಿಸಿದ ಕುಮಾರಸ್ವಾಮಿ ಅವರಿಗೆ ಸ್ಥಳೀಯ ಜನತೆ ಅದ್ದೂರಿ ಸ್ವಾಗತ ನೀಡಿದರು.

ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಕುಮಾರಸ್ವಾಮಿ ಅವರನ್ನು ಬಿಜೆಪಿ, ತೆಲುಗು ದೇಶಂ ಪಕ್ಷದ ಸಂಸದರು, ಶಾಸಕರು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಉಕ್ಕು ಕಾರ್ಖಾನೆಯ ಸಾವಿರಾರು ಕಾರ್ಮಿಕರು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಕಾರ್ಖಾನೆವರೆಗಿನ 14 ಕಿ.ಮೀ. ರಸ್ತೆಯುದ್ದಕ್ಕೂ ಜನರು ಕೇಂದ್ರ ಸಚಿವರಿಗೆ ಸ್ವಾಗತ ಕೋರಿದರು. ರಸ್ತೆಯ ಇಕ್ಕೆಲಗಳಲ್ಲಿ ಸಚಿವರ ಕಟೌಟ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು.
ಕಾರ್ಮಿಕ ಸಂಘಟನೆಗಳ ಸದಸ್ಯರು ಸಚಿವರಿಗೆ ಬೃಹತ್ ಹಾರ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಪರ ಘೋಷಣೆಗಳನ್ನು ಕೂಗಿದರು.