ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 14 ಬಿಡಿ ನಿವೇಶನಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ಪಾತ್ರ ಇದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್‌ಗೆ ನೀಡಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ಮುಡಾದ ಮಾಜಿ ಆಯುಕ್ತ ಡಿ.ಬಿ.ನಟೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಂದಿನ ಆಯುಕ್ತ ನಟೇಶ್ ಅವರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದೆ.
ಮುಡಾದಲ್ಲಿ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ದಾಖಲೆ ಪಡೆದುಕೊಳ್ಳುವಾಗ ೩೭ ಸಾಕ್ಷ್ಯಗಳನ್ನು ದಾಖಲಿಸಲಾಗಿದೆ.
ನಕಲಿ ಸಹಿ ವಿಚಾರ
ನಟೇಶ್ ನಮ್ಮ ತನಿಖೆಗೆ ಪ್ರಮುಖ ವ್ಯಕ್ತಿಯಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ನಕಲಿ ಸಹಿ ವಿಚಾರವನ್ನೂ ತಿಳಿಸಿದ್ದಾರೆ, ಹೀಗಾಗಿ ನಮಗೆ ಅವರ ವಿಚಾರಣೆಯ ಅಗತ್ಯವಿದೆ ಎಂದಿದೆ.
ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ, ಮುಡಾ ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬೆಳೆಸಿ ಈ ನಿವೇಶನಗಳನ್ನು ಪಡೆದುಕೊಂಡಿದ್ದಾರೆ.
ಇ.ಡಿ. ತನಿಖೆ ಆರಂಭವಾದ ನಂತರ ಪಾರ್ವತಿ ಅವರು 14 ನಿವೇಶನಗಳನ್ನು ಹಿಂತಿರುಗಿಸಿದ್ದಾರೆ.
ಸಾಕ್ಷ್ಯಗಳ ನಾಶ
ಆದರೆ, ನಿವೇಶನ ಪಡೆಯುವ ಸಂದರ್ಭದಲ್ಲಿ ದಾಖಲೆಗಳನ್ನು ತಿದ್ದಲಾಗಿದೆ, ಸಹಿಯನ್ನು ನಕಲು ಮಾಡಲಾಗಿದೆ, ಸಾಕ್ಷ್ಯಗಳನ್ನು ನಾಶ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ.
ಮುಖ್ಯಮಂತ್ರಿ ಅವರ ಕುಟುಂಬಕ್ಕೆ 14 ನಿವೇಶನಗಳ ಹಂಚಿಕೆಯಾದಾಗ ಅವರ ಪುತ್ರ ಡಾ.ಯತೀಂದ್ರ ವರುಣಾ ಕ್ಷೇತ್ರದ ಶಾಸಕರಾಗಿದ್ದರು, ಜೊತೆಗೆ ಮುಡಾ ಸದಸ್ಯರೂ ಆಗಿದ್ದರು.
ಅಕ್ರಮ ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು, ಎಚ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಆಪ್ತ ಸಹಾಯಕರಾಗಿದ್ದರು.
ಅನುಚಿತ ಪ್ರಭಾವ
ಸಿ.ಟಿ.ಕುಮಾರ್, ಮುಡಾ ಅಧಿಕಾರಿಗಳ ಮೇಲೆ ಅನುಚಿತ ಪ್ರಭಾವ ಬೀರಿದ್ದರು, ಸಹಿಯನ್ನೇ ನಕಲು ಮಾಡಿ ನಿವೇಶನಗಳು ಹಂಚಿಕೆ ಆಗುವಂತೆ ನೋಡಿಕೊಂಡಿದ್ದರು.
ಮುಡಾ ಜಮೀನನ್ನು 3,24,700 ರೂ. ಮೊತ್ತಕ್ಕೆ ಸ್ವಾಧೀನ ಪಡಿಸಿಕೊಂಡಿತ್ತು, ಈ ಜಮೀನನ್ನು ತಪ್ಪು ಮಾಹಿತಿ ಮತ್ತು ಪ್ರಭಾವ ಆಧರಿಸಿ, ಕಾನೂನುಬಾಹಿರವಾಗಿ ಡಿ-ನೋಟಿಫಿಕೇಷನ್ ಮಾಡಲಾಗಿದೆ.
ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಇದನ್ನು ಕೃಷಿ ಜಮೀನು ಎಂದು ಖರೀದಿಸಿದ್ದಾರೆ, ಅಷ್ಟರಲ್ಲಾಗಲೇ ಮುಡಾ ಇಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಿತ್ತು.
ತಕರಾರು ಎತ್ತಲಿಲ್ಲ
ಇದಕ್ಕೆ ಅಧಿಕಾರಿಗಳು ಯಾವುದೇ ತಕರಾರು ಎತ್ತಲಿಲ್ಲ, ತಪ್ಪು ಸ್ಥಳ ಪರಿಶೀಲನೆ ವರದಿ ಆಧರಿಸಿ ಭೂಮಿ ಪರಿವರ್ತನೆ ಮಾಡಲಾಗಿದೆ, ಆಗಲೂ ಮುಡಾ ಆಕ್ಷೇಪ ವ್ಯಕ್ತಪಡಿಸಿಲ್ಲ.
ರಾಜಕೀಯ ಪ್ರಭಾವ ಬಳಸಿ 56 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಪರಿಹಾರವಾಗಿ ಪಡೆದುಕೊಳ್ಳಲಾಗಿದೆ.
ಕಾನೂನುಬಾಹಿರವಾಗಿ ಪಡೆದ ನಿವೇಶನಗಳನ್ನು ಮುಡಾದಿಂದ ಪಡೆದ ಪರಿಹಾರವೆಂದು ಬಿಂಬಿಸಲಾಗಿದೆ.
ಅಂದು ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಶಾಮೀಲಾಗಿ ಈ ಕಾನೂನುಬಾಹಿರ ಪ್ರಕ್ರಿಯೆ ನಡೆಸಲಾಗಿದೆ.
14 ನಿವೇಶನ ವಾಪಾಸ್
ಇ.ಡಿ. ತನಿಖೆ ಆರಂಭ ನಂತರ ಪಾರ್ವತಿ ಅವರು ಅಕ್ಟೋಬರ್ 1ರಂದು 14 ನಿವೇಶನಗಳನ್ನು ಹಿಂತಿರುಗಿಸಿದ್ದಾರೆ.
ನಿವೇಶನ ಹಿಂತಿರುಗಿಸಿದ್ದರೂ ಇದರಲ್ಲಿ ಅಕ್ರಮ ಹಣ ವರ್ಗಾವಣೆ ಯತ್ನ ನಡೆದಿರುವುದು ಪತ್ತೆಯಾಗಿದೆ.
ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಜೆ.ದೇವರಾಜು, ಮುಡಾ ಅಧಿಕಾರಿಗಳು, ರಿಯಲ್ ಎಸ್ಟೇಟ್ ವ್ಯವಹಾರಸ್ಥರು, ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಅಕ್ರಮ ಹಣ ವರ್ಗಾವಣೆ ಕೇವಲ ಬಿ.ಎಂ.ಪಾರ್ವತಿ ಅವರ ಪ್ರಕರಣದಲ್ಲಿ ಮಾತ್ರವಲ್ಲ, ಸುಮಾರು 1095 ಮುಡಾ ಬಿಡಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ.