ಬೆಂಗಳೂರು:ಮೈಕ್ರೊ ಫೈನಾನ್ಸ್‌ಗೆ ಸಂಬಂಧಿಸಿದ ಕಾನೂನುಗಳು ಈಗಾಗಲೇ ಇವೆ, ಅವುಗಳನ್ನು ಹೊಸ ಕಾನೂನಿಗೆ ಹೇಗೆ ಸೇರಿಸಬಹುದೆಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿ ಸೂಚಿಸಿದ್ದು ಎರಡು-ಮೂರು ದಿನದಲ್ಲಿ ಅಂತಿಮಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕಾನೂನು ಕಾರ್ಯದರ್ಶಿ ಹಾಗೂ ಸಂಸದೀಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ, ಶೀಘ್ರವಾಗಿ ಹೊಸ ಕಾನೂನು ಮಾಡಲಿದ್ದಾರೆ, ಮೈಕ್ರೊ ಫೈನಾನ್ಸ್ ಸಂಸ್ಥೆಗಳು ವಸೂಲಿ ಸಂದರ್ಭದಲ್ಲಿ ದೌರ್ಜನ್ಯ ಎಸಗುತ್ತಿರುವುದರಿಂದ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದು, ಊರು ಬಿಟ್ಟು ಹೋಗುತ್ತಿದ್ದಾರೆ, ಇದು ನಿಲ್ಲಬೇಕಿದೆ, ಇದಕ್ಕೆ ಮುಖ್ಯವಾಗಿ ಕಾನೂನು ತರಬೇಕಿದೆ ಎಂದರು.
ತಪ್ಪಿತಸ್ಥರ ವಿರುದ್ಧ ಎಫ್‌ಐಆರ್
ನನ್ನ ಕ್ಷೇತ್ರದಲ್ಲಿ 2.50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ, ಅದಕ್ಕೆ 4.50 ಲಕ್ಷ ರೂ. ವಾಪಸ್ ಕಟ್ಟಿದ್ದಾರೆ, ಆದರೂ ಇನ್ನು 80 ಸಾವಿರ ರೂ. ಕಟ್ಟಬೇಕು ಅಂತ ಮನೆಗೆ ಬೀಗ ಹಾಕಿ, ಮನೆ ಮೇಲೆ ಅಂಟಿಸಿದ್ದಾರೆ, ಕುಟುಂಬಸ್ಥರು ಊರು ಬಿಟ್ಟು ಹೋಗಿದ್ದರು, ನನ್ನ ಗಮನಕ್ಕೆ ಬಂದಕೂಡಲೇ ಜಿಲ್ಲಾಧಿಕಾರಿ, ಎಸ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮನೆ ಬಿಟ್ಟು ಹೋಗಿದ್ದವರನ್ನು ವಾಪಸ್ ಕರೆತರಲಾಗಿದೆ, ಮನೆಗೆ ಪೇಂಟ್ ಮಾಡಿಸಿ ಕೊಡಲಾಗಿದೆ, ಇಂತಹ ಘಟನೆಗಳನ್ನು ನಿಲ್ಲಿಸಲು ಕಾನೂನು ಬೇಕು.
ಮೈಕ್ರೊ ಫೈನಾನ್ಸ್ ಇತ್ಯರ್ಥ ಬೇರೆ ವಿಚಾರ, ರಾಜ್ಯದಲ್ಲಿ ೫೯ ಸಾವಿರ ಕೋಟಿ ರೂ. ಸಾಲ ಕೊಟ್ಟಿದ್ದಾರೆ, ಆ ಬಗ್ಗೆ ಹೆಚ್ಚು ಒತ್ತು ನೀಡುವುದಿಲ್ಲ, ಕೂಡಲೇ ಕಾನೂನು ತಂದು ದೌರ್ಜನ್ಯ ತಡೆಯಬೇಕಿದೆ.
ಕೋರ್ಟ್‌ಗೆ ಹೋಗದಂತೆ ಕಾನೂನು
ಮೈಕ್ರೊ ಫೈನಾನ್ಸ್‌ಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂಬುದು ಗಮನಕ್ಕೆ ಬಂದಿದೆ, ಅವರು ಕೋರ್ಟ್‌ಗೆ ಹೋಗದಿರುವಂತಹ ಕಾನೂನು ಮಾಡಬೇಕಿದೆ, ಈ ಕುರಿತು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನದ ಕುರಿತು ಪ್ರತಿಕ್ರಿಯಿಸಿ, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರನ್ನು ನಾಮನಿರ್ದೇಶನ ಮಾಡುವಾಗ ನಮ್ಮ ಪಕ್ಷದಲ್ಲಿ ಕೆಲವು ಪದ್ಧತಿಗಳಿವೆ, ಎಲ್ಲರ ಪರವಾಗಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಮಾಡುತ್ತಾರೆ ಎಂದರು.
ನಿಗಮ-ಮಂಡಳಿಗೆ ಸದಸ್ಯರ ಆಯ್ಕೆ ಅಂತಿಮಗೊಳಿಸಿ, ಪಟ್ಟಿಯನ್ನು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೇನೆ, ಕಾರ್ಯಕರ್ತರನ್ನೂ ಅಧ್ಯಕ್ಷರಾಗಿ ಮಾಡಬೇಕಿದೆ.
ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ ಅವರೊಂದಿಗೆ ಸಭೆ ನಡೆಸಿಲ್ಲ, ವಾಲ್ಮೀಕಿ ಸಮುದಾಯದ ಸ್ವಾಮೀಜಿ ಜಾತ್ರೆಗೆ ಆಹ್ವಾನಿಸಲು ವಿಧಾನಸೌಧದ ನನ್ನ ಕಾರ್ಯಾಲಯಕ್ಕೆ ಬಂದಿದ್ದರು, ಆ ವೇಳೆಗೆ ಸ್ವಾಮೀಜಿಯವರು ನನ್ನ ಕಾರ್ಯಾಲಯದಲ್ಲಿ ಇರುವ ವಿಚಾರ ತಿಳಿದು ರಾಜಣ್ಣ, ಸತೀಶ್ ಜಾರಕಿಹೊಳಿ ಬಂದಿದ್ದರು, ಸ್ವಾಮೀಜಿ ಆಶೀರ್ವಾದ ಪಡೆದು ಹೋದರು ಎಂದರು.