ಬೆಂಗಳೂರು:ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಂಡೆದ್ದಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಸಚಿವರು ಅಹಿಂದ ಸಭೆಯನ್ನು ಬೃಹತ್ ಮಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ.
ಅಹಿಂದ ಸಭೆಯನ್ನು ನಾವು ಆಯೋಜಿಸಿದರೆ, ಶಿವಕುಮಾರ್ ವರಿಷ್ಠರ ಮೇಲೆ ಒತ್ತಡ ತಂದು ಅದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ.
ಬೃಹತ್ ಸಮಾವೇಶ
ಇದರ ಬದಲು, ಅಹಿಂದದ ವಿವಿಧ ಸಮಾಜದ ಮಠಾಧೀಶರ ಮೂಲಕ ಬೃಹತ್ ಸಮಾವೇಶವನ್ನು ಮಧ್ಯೆ ಕರ್ನಾಟಕದಲ್ಲಿ ಆಯೋಜಿಸಲು ತೀರ್ಮಾನಿಸಿದ್ದಾರೆ.
ಸಮಾವೇಶ ನಡೆಸುವ ಉದ್ದೇಶದಿಂದಲೇ ಕೆಲವು ಮಠಾಧೀಶರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿಧಾನಸೌಧದ ಕೊಠಡಿಗೆ ಕರೆಸಿಕೊಂಡ ಈ ಸಚಿವರುಗಳು ಅವರ ಮನವೊಲಿಸಿ ಅಹಿಂದ ಸಮಾವೇಶದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸಮಾವೇಶದ ಉಸ್ತುವಾರಿ ಎಲ್ಲವನ್ನೂ ನಾವು ಮಾಡುತ್ತೇವೆ, ಆದರೆ, ನಿಮ್ಮ ನಾಯಕತ್ವದಲ್ಲಿ ಸಭೆ ನಡೆಯುತ್ತದೆ, ಆ ಸಭೆಗೆ ಅಹಿಂದ ವರ್ಗಗಳಿಗೆ ಸೇರಿದ ಮುಖಂಡರುಗಳಿಗೆ ಮಾತ್ರ ಆಹ್ವಾನ ನೀಡಿ.
ಹಕ್ಕೊತ್ತಾಯ ಮಾಡಿ
ಸಭೆಯಲ್ಲಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ನೀವೇ ಬಿಡಿಸಿಡಿ, ಅಷ್ಟೇ ಅಲ್ಲ, ಸರ್ಕಾರದಿಂದ ಏನಾಗಬೇಕೆಂದು ಹಕ್ಕೊತ್ತಾಯ ಮಾಡಿ.
ಸ್ವಾಮೀಜಿಗಳು ಈ ರೀತಿ ಮಾಡುವುದರಿಂದ ಅಹಿಂದ ವರ್ಗದ ಜನರಿಗೆ ಸರ್ಕಾರದ ಒಂದಷ್ಟು ಸವಲತ್ತು ದೊರೆಯುವ ಜೊತೆಗೆ ನಮ್ಮ ಒಗ್ಗಟ್ಟು ಬಲಗೊಳ್ಳುತ್ತದೆ.
ಮುಂದಿನ ದಿನಗಳಲ್ಲಿ ಸರ್ಕಾರದ ನಾಯಕತ್ವದಲ್ಲೂ ಬದಲಾವಣೆ ತಳ್ಳಿಹಾಕುವಂತಿಲ್ಲ, ಇಂತಹ ಸನ್ನಿವೇಶದಲ್ಲಿ ಪರಿಶಿಷ್ಟ ಸಮಯದಾಯಕ್ಕೆ ಸೇರಿದರು ಮುಖ್ಯಮಂತ್ರಿ ಆಗಲು ಸಭೆ ಸಹಕಾರಿಯಾಗುತ್ತದೆ ಎಂದಿದ್ದಾರೆ.
ಪೀಠಾಧೀಶರ ಸಭೆ
ಡಾ.ಪರಮೇಶ್ವರ್ ಕೊಠಡಿಯಲ್ಲಿ ನಡೆದ ಸಭೆಗೆ ಕೆಲವು ಪೀಠಾಧೀಶರಲ್ಲದೆ, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಎಚ್.ಸಿ.ಮಹದೇವಪ್ಪ ಭಾಗವಹಿಸಿದ್ದರು.
ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಸಚಿವರು, ಶಾಸಕರು, ಮುಖಂಡರ ಸಭೆಯನ್ನು ಗೃಹ ಸಚಿವ ಡಾ.ಪರಮೇಶ್ವರ್ ಈ ಹಿಂದೆ ಕರೆಯಲು ಮುಂದಾಗಿದ್ದರಾದರೂ ಹೈಕಮಾಂಡ್ ಅವಕಾಶ ಕೊಟ್ಟಿರಲಿಲ್ಲ.
ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಭೆಗಳ ಬಗ್ಗೆ ಗರಂ ಆಗಿ, ಸಚಿವರಿಗೆ ಬಾಯಿ ಮುಚ್ಚಿಕೊಂಡು ನಿಮಗೆ ನೀಡಿರುವ ಕೆಲಸ ಮಾಡಿ ಎಂದು ಗುಡುಗಿದ್ದರು.
ತೆರೆಮರೆ ಅಡ್ಡಿ ಯತ್ನ
ಮತ್ತೆ ನಾವು ಇಂತಹ ಸಭೆ ಮಾಡಲು ಹೊರಟರೆ ಶಿವಕುಮಾರ್, ತೆರೆಮರೆಯಲ್ಲಿ ಅಡ್ಡಿ ಮಾಡುತ್ತಾರೆ.
ನಾವು ಮುಂಚೂಣಿಯಲ್ಲಿ ನಿಂತು ಮಾಡುವ ಬದಲು ನಮ್ಮ ಸಮಾಜಗಳಿಗೆ ಸೇರಿದ ಮಠಾಧಿಪತಿಗಳಿಂದ ಸಭೆ ನಡೆಸಿದರೆ, ಇದಕ್ಕೆ ತಕರಾರು ಎತ್ತುವುದಿಲ್ಲ ಎಂಬ ಕಾರಣಕ್ಕಾಗಿ ಈ ಸಮಾವೇಶ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.