ಬೆಂಗಳೂರು:ಸ್ನಾನಗೃಹದಲ್ಲಿ ಆಯತಪ್ಪಿ ಬಿದ್ದು ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರದಿಂದ ಎಂದಿನಂತೆ ತಮ್ಮ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಮೈಸೂರು ಪ್ರವಾಸ ವೇಳೆ ಈ ಘಟನೆಗೆ ಒಳಗಾಗಿದ್ದ ಮುಖ್ಯಮಂತ್ರಿ ಅವರು, ವೈದ್ಯರ ಸಲಹೆ ಮೇರೆಗೆ ಐದು ದಿನಗಳ ಕಾಲ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಪೂರ್ಣ ವಿಶ್ರಾಂತಿಯಲ್ಲಿದ್ದಾರೆ.
10 ದಿನ ಪೂರ್ವಭಾವಿ ಸಭೆ
ಕಳೆದ ಸೋಮವಾರದಿಂದ ಸತತವಾಗಿ 10 ದಿನಗಳ ಕಾಲ 2025-26ನೇ ಸಾಲಿನ ಮುಂಗಡಪತ್ರ ಸಿದ್ಧತೆಯ ಪೂರ್ವಭಾವಿ ಸಭೆಗಳನ್ನು ಕರೆದಿದ್ದರು.
ಆದರೆ, ಈ ಘಟನೆಯಿಂದ ಪೂರ್ವಭಾವಿ ಸಭೆ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದರು.
ಇದೀಗ ಫೆಬ್ರವರಿ 6ರಿಂದ ಶನಿವಾರ, ಭಾನುವಾರ ಹೊರತುಪಡಿಸಿ 8 ದಿನಗಳ ಕಾಲ ಮುಂಗಡಪತ್ರದ ಇಲಾಖಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ದಿನವಿಡೀ ಸಭೆಗಳು
ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ರವರೆಗೆ 12 ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಫೆಬ್ರವರಿ 14ರಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖಾ ಅಧಿಕಾರಿಗಳೊಂದಿಗಿನ ಸಮಾಲೋಚನೆ ಮೂಲಕ ಬಜೆಟ್ ಪೂರ್ವ ಸಭೆಗಳು ಮುಕ್ತಾಯಗೊಳ್ಳಲಿವೆ.
ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರು, ಮಾರ್ಚ್ ಎರಡನೇ ವಾರದಲ್ಲಿ ವಿಧಾನಸಭೆಯಲ್ಲಿ ಮುಂಗಡಪತ್ರ ಮಂಡಿಸಲಿದ್ದಾರೆ.
ಜಂಟಿ ಅಧಿವೇಶನ
ಈ ಉದ್ದೇಶದಿಂದ ಮಾರ್ಚ್ ಮೊದಲ ವಾರದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಕರೆಯಲು ಸರ್ಕಾರ ತೀರ್ಮಾನಿಸಿದೆಯಾದರೂ, ಅಧಿಕೃತ ಘೋಷಣೆ ಆಗಿಲ್ಲ.
ಮುಡಾ ಬಿಡಿ ನಿವೇಶನಗಳ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ಏಕಕಾಲದಲ್ಲಿ ತನಿಖೆ ಕೈಗೊಂಡಿರುವುದು ಮುಖ್ಯಮಂತ್ರಿ ಅವರಿಗೆ ಬಜೆಟ್ ತಯಾರಿ ವೇಳೆಯಲ್ಲೂ ಗೊಂದಲದ ಸ್ಥಿತಿ ಎದುರಿಸುವಂತಾಗಿದೆ.
ಇದರ ನಡುವೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಪಡೆದಿರುವ 14 ಬಿಡಿ ನಿವೇಶನಗಳ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದಾರೆ.
ಕಾಯ್ದಿರಿಸಿದ ತೀರ್ಪು
ರಿಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ, ತೀರ್ಪು ಕಾಯ್ದಿರಿಸಿದೆ.
ತೀರ್ಪು ಏನಾಗಬಹುದೆಂಬ ಆತಂಕವೂ ಮುಖ್ಯಮಂತ್ರಿ ಅವರ ಮನಸ್ಸಿನಲ್ಲಿ ಮನೆ ಮಾಡಿರುವುದಂತೂ ಸಹಜ.