ಬೆಂಗಳೂರು:ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸುತ್ತೇನೆ ಎಂಬುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಈ ಕೆಲಸ ಮಾಡಲಿ, ಆಮೇಲೆ ಮಾತಾಡಲಿ, ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆಯಿಡಲಿಲ್ಲ ನಾವು ಈಗ ಹೆಜ್ಜೆ ಇಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಬಿಡದಿ, ನೆಲಮಂಗಲ. ತುಮಕೂರು, ಸೋಲೂರು ಸೇರಿದಂತೆ ಯಾವ ಸ್ಥಳದಲ್ಲಿ ಸ್ಥಾಪಿಸಬೇಕೆಂಬ ತೀರ್ಮಾನ ನಮ್ಮ ವ್ಯಾಪ್ತಿಯಲ್ಲಿಲ್ಲ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರು ತೀರ್ಮಾನ ಮಾಡುತ್ತಾರೆ ಎಂದರು.
ಕಾಲಮಿತಿ ಒಪ್ಪಂದವಿದೆ
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡದಿರಲು ಕಾಲಮಿತಿ ಒಪ್ಪಂದವಿದೆ, ಈ ಕುರಿತು ಎರಡೂ ಸಂಸ್ಥೆಗಳು ಸೇರಿ ತೀರ್ಮಾನ ಮಾಡುತ್ತವೆ.
ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದೆ, ಮುಖ್ಯಮಂತ್ರಿ ಹಾಗೂ ತಮ್ಮ ಬಳಿ ಮಾತನಾಡಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರದ ಅನುಮತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ನಮ್ಮ ಊರಿನಲ್ಲಿ ವಿಮಾನ ನಿಲ್ದಾಣ ಬರಬೇಕು ಎನ್ನುವ ಆಸೆ ನನಗಿದೆ, ಆದರೆ, ಆ ರೀತಿ ಮಾಡಲು ಆಗುವುದಿಲ್ಲ, ವಿಮಾನ ನಿಲ್ದಾಣ ನಿರ್ಮಾಣ ಆಗಬೇಕೆಂದರೆ ಸಾಕಷ್ಟು ರೀತಿ, ರಿವಾಜುಗಳಿವೆ, ಸಮೀಪದಲ್ಲಿ ಗುಡ್ಡಗಳು ಇರಬಾರದು, ಫ್ಲೈಯಿಂಗ್ ಜೋನ್ ಇರಬೇಕೆಂಬ ನಿಯಮಗಳಿವೆ, ಒಟ್ಟು 4,400 ಎಕರೆ ಭೂಮಿಯ ಅಗತ್ಯವಿದೆ.

ತಾಂತ್ರಿಕ ವಿಚಾರಗಳಿರುತ್ತವೆ
ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣ ವೇಳೆ ನಾನೇ ನಗರಾಭಿವೃದ್ದಿ ಸಚಿವನಾಗಿದ್ದೆ, ವಿಮಾನ ನಿಲ್ದಾಣ ಮಾಡಲು ತಾಂತ್ರಿಕ ವಿಚಾರಗಳಿರುತ್ತವೆ, ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ.
ವಿಮಾಣ ನಿಲ್ದಾಣಕ್ಕೆ ಒತ್ತಡವನ್ನು ಕುಮಾರಸ್ವಾಮಿ ಜಮೀನಿನ ಪಕ್ಕದವರು ಒತ್ತಾಯ ತರುತ್ತಾರೆ, ನಾನೂ ನನ್ನ ಜಮೀನು ಪಕ್ಕದಲ್ಲಿ ಇದ್ದವರಿಂದ ಮನವಿ ಮಾಡಿಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ದೆಹಲಿ ವಿಧಾನಸಭಾ ಚುನಾವಣೆಯ ಕುರಿತ ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆಯಿಲ್ಲ, ಮತದಾರರ ತೀರ್ಮಾನದ ಫಲಿತಾಂಶಕ್ಕಾಗಿ ಕಾಯೋಣ.
ಸುಗ್ರೀವಾಜ್ಞೆ ರಾಜ್ಯಪಾಲರ ಅಂಕಿತಕ್ಕೆ
ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಅಂಕುಶ ಹಾಕುವ ಸುಗ್ರೀವಾಜ್ಞೆ ರಾಜ್ಯಪಾಲರ ಅಂಕಿತಕ್ಕೆ ಮುಖ್ಯಮಂತ್ರಿ ಕಳುಹಿಸುತ್ತಿದ್ದಾರೆ, ಸಹಿ ನಂತರ ನಂತರ ಜಾರಿಗೆ ತರಲಾಗುವುದು ಎಂದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್‌ಗೆ ಎಸ್‌ಐಟಿ ನೋಟಿಸ್ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ, ತನಿಖೆ ನಿಯಮದಂತೆ ನಡೆಯುತ್ತದೆ.
‘ನಟ ಸುದೀಪ್ ಅವರದ್ದು ಸೌಜನ್ಯಯುತ ಭೇಟಿ, ಚಿತ್ರೀಕರಣಕ್ಕೆ ತೊಂದರೆಯಾದ ಕಾರಣಕ್ಕೆ ಬಂದಿದ್ದರು, ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದಿದ್ದೇನೆ, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ, ಅವರು ಒಬ್ಬ ಗೆಳೆಯರಾಗಿ ಭೇಟಿಯಾಗಿದ್ದಾರೆ.
ಹಿಂದೂ ಎನ್ನುವ ಪದ ಚಾಲ್ತಿಗೆ ತಂದಿದ್ದೇ ಕಾಂಗ್ರೆಸ್ ಎಂಬ ಸಂತೋಷ್ ಲಾಡ್ ಹೇಳಿಕೆ ಬಗ್ಗೆ ತಿಳಿದಿಲ್ಲ ಎಂದರು.