ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಮುಖ್ಯಮಂತ್ರಿ ಕುಟುಂಬ ಪಡೆದ 14 ಬಿಡಿ ನಿವೇಶನಗಳ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ತನಿಖೆ ಅಸಮರ್ಪಕ ಎನ್ನುವುದಕ್ಕೆ ಕಾರಣಗಳಿಲ್ಲ, ಲೋಕಾಯುಕ್ತ ತನಿಖೆ ತಾರತಮ್ಯಪೂರಿತ ಎಂಬುದಕ್ಕೆ ಆಧಾರಗಳಿಲ್ಲ ಹಾಗೂ ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ ಎನ್ನುವ ಮೂಲಕ ಅರ್ಜಿಯನ್ನು ವಜಾ ಮಾಡಿದೆ.
ತೀರ್ಪಿನಿಂದ ನಿರಾಳತೆ
ಹೈಕೋರ್ಟ್ ತೀರ್ಪಿನಿಂದ ತೀವ್ರ ಗೊಂದಲದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರಾಳತೆ ದೊರೆತಿದೆ.
ಲೋಕಾಯುಕ್ತ ಪೊಲೀಸರು ನಡೆಸಿದ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ತೀರ್ಪು ಕುರಿತು ಪ್ರತಿಕ್ರಿಯಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಕಾನೂನು ಹೋರಾಟ ಮುಂದುವರಿಸುತ್ತೇವೆ, ತೀರ್ಪಿನ ಹೈಕೋರ್ಟ್ ಆದೇಶ ಪ್ರತಿ ದೊರೆತ ನಂತರ ಮೇಲ್ಮನವಿ ಸಲ್ಲಿಸಲಾಗುವುದು, ಲೋಕಾಯುಕ್ತ ತನಿಖೆ ಬಗ್ಗೆ ನಂಬಿಕೆ ಇಲ್ಲ ಎಂದರು.

ಲೋಕಾಯುಕ್ತ ತನಿಖೆ
ಲೋಕಾಯುಕ್ತ ಪೋಲಿಸರಿಂದ ಮುಡಾ ಹಗರಣದ ಸಮರ್ಪಕ ತನಿಖೆ ಸಾಧ್ಯವಿಲ್ಲ, ನ್ಯಾಯ ಸಿಗುವುದಿಲ್ಲ ಎಂದಿದ್ದ ಸ್ನೇಹಮಯಿ ಕೃಷ್ಣ, ಸಿಬಿಐ ತನಿಖೆ ಆದೇಶ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಮುಡಾ ಹಗರಣದಲ್ಲಿ 3 ಲಕ್ಷ 26 ಸಾವಿರ ಮೊತ್ತದ ಜಮೀನು ಸ್ವಾಧೀನಕ್ಕೆ ಬದಲಿಗೆ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ 14 ದುಬಾರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಅಸ್ತಿತ್ವದಲ್ಲೇ ಇಲ್ಲದ ಜಮೀನಿನ ಭೂಪರಿವರ್ತನೆ ಮಾಡಲಾಗಿದೆ.
ಸಚಿವ ಸಂಪುಟ ಟಿಪ್ಪಣಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಟಿಪ್ಪಣಿಯೂ ಸಿದ್ದರಾಮಯ್ಯ ಅವರ ಪತ್ನಿಗೆ ಅನುಕೂಲವಾಗುವಂತೆ ಇದೆ, ಅಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು.
ಪ್ರಭಾವಿಗಳು ಶಾಮೀಲು
ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಈ ಮೊಕದ್ದಮೆಯಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ, ಆರೋಪಿ ಮುಖ್ಯಮಂತ್ರಿ ಎಂಬ ಒಂದೇ ಕಾರಣಕ್ಕೆ ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಉದಾಹರಣೆಗಳಿವೆ ಎಂಬ ವಾದ ಮಂಡಿಸಿದ್ದರು.
ಮುಖ್ಯಮಂತ್ರಿಗಳ ರಕ್ಷಣೆಗೆ ಇಡೀ ಸಚಿವ ಸಂಪುಟವೇ ಒಂದಾಗಿರುವಾಗ ಸ್ಥಳೀಯ ಲೋಕಾಯುಕ್ತ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದ ಕಾರಣ ನ್ಯಾಯ ಎತ್ತಿಹಿಡಿಯಲು ಸ್ವತಂತ್ರ ಹಾಗೂ ನ್ಯಾಯಸಮ್ಮತ ಸಂಸ್ಥೆಯಿಂದ ತನಿಖೆ ಅನಿವಾರ್ಯ ಎಂಬುದಾಗಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ರಾಜ್ಯ ಸರ್ಕಾರದ ಪರ ವಕೀಲರು ತಮ್ಮ ವಾದದಲ್ಲಿ, ಲೋಕಾಯುಕ್ತ ಪೋಲಿಸರು ರಾಜ್ಯ ಸರ್ಕಾರದ ಹಿಡಿತದಲ್ಲಿದ್ದಾರೆ, ಎನ್ನುವುದಾದರೆ, ಸಿಬಿಐ ಸಹಾ ಕೇಂದ್ರ ಸರ್ಕಾರದ ಅಧೀನದಲ್ಲಿದೆ, ಆದ್ದರಿಂದ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ.
ಪೊಲೀಸರ ಮೇಲೆ ನಿಗಾ
ಲೋಕಾಯುಕ್ತ ಕಳಂಕಿತ ಎಂಬದಾಗಿ ಹೇಳಲಾಗದು, ಲೋಕಾಯುಕ್ತ ಪೊಲೀಸರ ಮೇಲೆ ಲೋಕಾಯುಕ್ತ ಸಂಸ್ಥೆ ನಿಗಾ ಇರುತ್ತದೆ, ಆದ್ದರಿಂದ ಲೋಕಾಯುಕ್ತ ತನಿಖೆ ಸ್ವತಂತ್ರವಾಗಿರಲಿದೆ.
ಸಿಬಿಐ ಸ್ವತಂತ್ರ ಸಂಸ್ಥೆ ಎನ್ನವುದಾದರೆ ಲೋಕಾಯುಕ್ತ ಸಹಾ ಸ್ವತಂತ್ರ ಸಂಸ್ಥೆಯಾಗಿದೆ, ಪ್ರಸ್ತುತ ನಡೆಸುತ್ತಿರುವ ತನಿಖೆಯೂ ಸೂಕ್ತವಾಗೇ ಇದೆ, ತನಿಖೆ ತಾರತಮ್ಯವಾಗಿದ್ದಾಗ ಮಾತ್ರ ಬೇರೆ ಸಂಸ್ಥೆಯಿಂದ ತನಿಖೆಗೆ ಮನವಿ ಮಾಡಬಹುದು.
ಲೋಕಾಯುಕ್ತ ಪೊಲೀಸರ ಅಂತಿಮ ವರದಿ ನಂತರ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ, ಇದಕ್ಕೂ ಮುನ್ನವೇ ತೀರ್ಮಾನಿಸಲು ಅವಕಾಶವಿಲ್ಲ, ಅಂತಿಮ ವರದಿಯಲ್ಲಿ ಲೋಪವಿದ್ದರೆ ಮರು ತನಿಖೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು ವರದಿಯಲ್ಲಿ ಏನಿದೆಯೆಂದು ತಿಳಿಯದೇ, ವಾದ ಆಲಿಸದೇ ತೀರ್ಮಾನಿಸಬಾರದು.
ಅಪರೂಪ ಪ್ರಕರಣವಲ್ಲ
ಸಿಬಿಐ ತನಿಖೆಗೆ ಅರ್ಹವೆನ್ನಲು ಇದು ಅಪರೂಪ ಪ್ರಕರಣವಲ್ಲ, ಲೋಕಾಯುಕ್ತ ತನಿಖೆಯಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ, ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದುಕೊಂಡರು.
ಅರ್ಜಿದಾರರು ಮೊದಲು ಲೋಕಾಯುಕ್ತ ಪೊಲೀಸರ ತನಿಖೆ ಕೋರಿ, ತನಿಖೆಗೆ ಮೊದಲೇ ಸಿಬಿಐಗೆ ನೀಡುವಂತೆ ಕೇಳುತ್ತಿದ್ದಾರೆ, ಆದರೆ, ಲೋಕಾಯುಕ್ತ ಪೊಲೀಸ್ ತನಿಖೆಯಲ್ಲಿನ ಲೋಪ ಏನೆಂದು ತಿಳಿಸಿಲ್ಲ, ಆರೋಪಿ ಸ್ಥಾನದಲ್ಲಿ ಮುಖ್ಯಮಂತ್ರಿ ಇದ್ದಾರೆ ಎಂಬ ಮಾತ್ರಕ್ಕೆ ಸಿಬಿಐ ತನಿಖೆ ಕೇಳುತ್ತಿದ್ದಾರೆ, ಇದು ತಪ್ಪು ಮೇಲ್ಪಂಕ್ತಿಗೆ ನಾಂದಿಯಾಗುತ್ತದೆ ಎಂದು ಸಿದ್ದರಾಮಯ್ಯ ಪರ ವಕೀಲ ವಾದ ಮಂಡಿಸಿದ್ದರು.