ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣದ ತೀರ್ಪಿನಲ್ಲಿ ಎಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಪರಾಧಿ ಎಂಬುದಾಗಿ ಹೈಕೋರ್ಟ್ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಸಿಬಿಐಯಿಂದ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ, ಆದರೆ, ಇದರರ್ಥ ಸಿದ್ದರಾಮಯ್ಯ ನಿರಪರಾಧಿ ಎಂಬುದಲ್ಲ ಎಂದರು.

ಆರೋಪಮುಕ್ತರನ್ನಾಗಿ ಮಾಡಿಲ್ಲ
ಸಿದ್ದರಾಮಯ್ಯ ಅವರನ್ನು ಹೈಕೋರ್ಟ್ ಆರೋಪಮುಕ್ತರನ್ನಾಗಿ ಮಾಡಿಲ್ಲ, ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂಬುದಷ್ಟನ್ನೇ ಹೇಳಿದೆ, ಇದರಿಂದ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬ ಒಳಗೊಂಡ ಆರೋಪ ಕುರಿತು ಬಿಜೆಪಿ ನಡೆಸಿದ ಹೋರಾಟ ಮತ್ತು ಪಾದಯಾತ್ರೆಗೆ ಹಿನ್ನಡೆಯಾಗಿಲ್ಲ.
ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಯುತ್ತಿದೆ, ಮುಂದೇ ನು ಆಗುತ್ತದೆ ಎಂಬುದನ್ನು ಕಾದು ನೋಡೋಣ.
ಆರೋಪಕ್ಕೆ ಈಗಲೂ ಬದ್ಧ
ಹೈಕೋರ್ಟ್ ತೀರ್ಪಿನಲ್ಲಿ ಮುಖ್ಯಮಂತ್ರಿ ಕುಟುಂಬ ನಿರಪರಾಧಿ ಎಂಬುದಾಗಿ ಹೇಳಿದೆಯೇ ಎಂದು ಪ್ರಶ್ನಿಸಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿದೆ ಆಗಿರುವುದು ಮತ್ತು ಸಾವಿರಾರು ಕೋಟಿ ರೂ. ಲೂಟಿ ಆಗಿದೆ ಎಂದು ಆರೋಪಿಸಿ ಹೋರಾಟ ಮಾಡಿದ್ದೆವು, ನಮ್ಮ ಆರೋಪಕ್ಕೆ ಈಗಲೂ ಬದ್ಧರಾಗಿದ್ದೇವೆ, ಲೋಕಾಯುಕ್ತ ತನಿಖೆ ಪೂರ್ಣ ವರದಿ ನಂತರ ಮಾತನಾಡುತ್ತೇವೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಮೊಕದ್ದಮೆಯಲ್ಲಿ ವಿಚಾರಣಾ ನ್ಯಾಯಾಲಯದ ಸಮನ್ಸ್ ಅನ್ನು ಹೈಕೋರ್ಟ್ ಬದಿಗಿರಿಸಿ, ವಾದ-ಪ್ರತಿವಾದ ಆಲಿಸಿ, ಸಮನ್ಸ್ ರದ್ದು ಪಡಿಸಿ, ಮರುಪರಿಶೀಲಿಸುವಂತೆ ನಿರ್ದೇಶನ ನೀಡಿದೆ ಎಂದರು.