ವೈಮಾನಿಕ ಕೌಶಲ್ಯ ಪ್ರೋತ್ಸಾಹಿಸಿ ಪ್ರತಿಭಾ ಪಲಾಯನ ತಡೆಗಟ್ಟಿ
ಬೆಂಗಳೂರು:ಏರೋಸ್ಪೇಸ್ ಉದ್ಯಮದಲ್ಲಿ ಬೆಂಗಳೂರು ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದ್ದು, ವಿಮಾನ ಮತ್ತು ಹೆಲಿಕಾಪ್ಟರ್ ತಯಾರಕರಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭಾ ಪಲಾಯನ ತಡೆಗಟ್ಟಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಆರಂಭವಾದ ಏರೋ ಇಂಡಿಯಾದ ಏರ್ ಶೋ-2025ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರ್ನಾಟಕದಲ್ಲಿ ಏರೋಸ್ಪೇಸ್ ಉದ್ಯಮ ಸ್ಥಾಪನೆ ಹಾಗೂ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ತಯಾರಕರನ್ನು ಬೆಂಗಳೂರಿನ ಕಡೆಗೆ ಗಮನಹರಿಸುವಂತೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಮುಂಚೂಣಿಯಲ್ಲಿ
ಭಾರತದ ತಾಂತ್ರಿಕ ಮತ್ತು ಕೈಗಾರಿಕಾ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ವಿಶ್ವ ದರ್ಜೆಯ ಸಂಶೋಧನಾ ಸಂಸ್ಥೆ ಹಾಗೂ ಅತ್ಯಾಧುನಿಕ ಏರೋಸ್ಪೇಸ್ ಕಂಪನಿಗಳ ಕೌಶಲ್ಯಪೂರ್ಣ ಕಾರ್ಯಪಡೆಯನ್ನೇ ಹೊಂದಿದೆ.
ದೇಶದ ಒಟ್ಟು ದೇಶೀಯ ಉತ್ಪನ್ನ, ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಯ ಒಳಹರಿವು ಸೇರಿದಂತೆ ಪ್ರಮುಖ ಆರ್ಥಿಕ ಕ್ಷೇತ್ರಗಳಲ್ಲಿ ಕರ್ನಾಟಕ ಅಗಾಧ ಬೆಳವಣಿಗೆ ಕಂಡಿದೆ, ಕೈಗಾರಿಕಾ ನೀತಿ ಪೋಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಏರೋ ಇಂಡಿಯಾ ಪ್ರದರ್ಶನ ಮೊದಲ ಬಾರಿಗೆ 1996ರಲ್ಲಿ ಪ್ರಾರಂಭವಾಗಿ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಬೆಳೆಸುವ ವೇದಿಕೆಯಾಗಿದೆ.

ಒಂದು ಸಾವಿರ ಎಕರೆ ಮೀಸಲು
ಏರೋಸ್ಪೇಸ್ ನೀತಿ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ, ದೇವನಹಳ್ಳಿ ಬಳಿ ಏರೋಸ್ಪೇಸ್ ಕಂಪನಿಗಳಿಗಾಗಿ ಒಂದು ಸಾವಿರ ಎಕರೆ ಮೀಸಲಿಟ್ಟು ಏರೋಸ್ಪೇಸ್ ಪಾರ್ಕ್ ಸ್ಥಾಪಿಸಿದೆ.
ಅಂತರರಾಷ್ಟ್ರೀಯ ಮಟ್ಟಕ್ಕೆ ಏರೋಸ್ಪೇಸ್ ಉದ್ಯಮ ಕೊಂಡೊಯ್ಯಲು ಬೆಂಗಳೂರು ಉತ್ತಮ ನಗರವಾಗಿದೆ, ಅಲ್ಲದೆ, ವ್ಯಾಪಾರ ಒಪ್ಪಂದ, ಉದ್ದಿಮೆಗಳ ಉತ್ಪನ್ನಗಳ ಪರೀಕ್ಷೆಗೆ ಸೂಕ್ತ ಸ್ಥಳವಾಗಿದೆ, ಏರೋಸ್ಪೇಸ್ ಭವಿಷ್ಯ ರೂಪುಗೊಳ್ಳುತ್ತಿರುವ ಸ್ಥಳವಾಗಿದೆ ಎಂದರು.
ಭಾರತದ ಏರೋಸ್ಪೇಸ್ ರಾಜಧಾನಿ ಬೆಂಗಳೂರು, ಉತ್ಪಾದನೆ ಮತ್ತು ರಕ್ಷಣಾ ಸಂಶೋಧನೆಯಲ್ಲಿ ಶೇ.60 ಕ್ಕಿಂತ ಹೆಚ್ಚು ಕೊಡುಗೆ ನೀಡುವ ರಾಜ್ಯವಾಗಿದೆ.
ಎಚ್‌ಎಎಲ್, ಇಸ್ರೋ ಮತ್ತು ಬೋಯಿಂಗ್ ಇಂಡಿಯಾ ಸಂಸ್ಥೆಗಳು ಭಾರತದ ರಕ್ಷಣಾ ಮತ್ತು ಬಾಹ್ಯಾಕಾಶ ಸಾಮರ್ಥ್ಯಕ್ಕೆ ಸಾಕಷ್ಟು ಕೊಡುಗೆ ನೀಡಿವೆ.
ಒಂದೂವರೆ ಲಕ್ಷ ಜನರಿಗೆ ಉದ್ಯೋಗ
ಬೆಂಗಳೂರು ಏರೋಸ್ಪೇಸ್ ವಲಯದಲ್ಲಿ ಒಂದೂವರೆ ಲಕ್ಷ ಜನ ಉದ್ಯೋಗದಲ್ಲಿದ್ದಾರೆ, ವಿದೇಶಿ ಹೂಡಿಕೆ ಆಕರ್ಷಿಸುವಲ್ಲಿ ಹಾಗೂ ಜಾಗತಿಕ ಏರೋಸ್ಪೇಸ್ ನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ.
ಕರ್ನಾಟಕ ಸರ್ಕಾರ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರಗಳಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ.
ವಾಣಿಜ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಮತ್ತು ಮಾನವರಹಿತ ವೈಮಾನಿಕ ತಂತ್ರಜ್ಞಾನದ ರುವಾರಿಯಾಗಿ ಬೆಂಗಳೂರು ಬೆಳೆಯುತ್ತಿದೆ.
ಅತಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳು
ಭಾರತದ ಅತಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳನ್ನು ಹೊಂದಿದ ಬೆಂಗಳೂರನ್ನು ದೇಶದ ಸಿಲಿಕಾನ್ ಸಿಟಿ ಎನ್ನುತ್ತಾರೆ.
ನಗರದಲ್ಲಿ 21 ಎಂಜಿನಿಯರಿಂಗ್ ಕಾಲೇಜುಗಳಿವೆ, ವಿಶ್ವದ ಯಾವುದೇ ನಗರಗಳಿಗೆ ಹೋಲಿಸಿದರೆ ಮೊದಲ ಸ್ಥಾನದಲ್ಲಿ ನಿಲ್ಲುತ್ತೇವೆ, ಬೆಂಗಳೂರಿನ ವಿಶಿಷ್ಟ ಪರಿಸರ ಪ್ರತಿಭೆ ಬಳಸಿಕೊಳ್ಳುವ, ಬೆಳೆಸುವ, ಕನಸು ನನಸು ಮಾಡುವ ಸ್ಥಳವಾಗಿದೆ.
ಅಮೆರಿಕ, ಫ್ರಾನ್ಸ್, ರಷ್ಯಾದೊಂದಿಗಿನ ಪಾಲುದಾರಿಕೆ ಮೂಲಕ ಭಾರತದ ಏರೋಸ್ಪೇಸ್ ಉದ್ಯಮವು ಬೆಳೆಯುತ್ತಿದೆ.
ಬೆಂಗಳೂರು ಏರ್ ಶೋ ಬಾಹ್ಯಾಕಾಶದಲ್ಲಿ ಭಾರತದ ಶಕ್ತಿ, ಪ್ರಗತಿ ಮತ್ತು ನಾಯಕತ್ವದ ಸಂಕೇತ, ಬಾಹ್ಯಾಕಾಶ ಮತ್ತು ರಕ್ಷಣಾ ಹೂಡಿಕೆದಾರರು, ಉದ್ಯಮಿಗಳ ಮೊದಲ ಆಯ್ಕೆ ಕರ್ನಾಟಕವಾಗಬೇಕು ಎಂದು ಮನವಿ ಮಾಡಿದರು.