ಬೆಂಗಳೂರು:ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣಕ್ಕೆ ಬರುವಂತೆ ಪರಿಶಿಷ್ಟ ಸಮುದಾಯದ ಸಚಿವರುಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಾಯಕತ್ವದಲ್ಲಿ ಸಮುದಾಯದ ಶಾಸಕರು ಹಾಗೂ ಸಚಿವರು, ನಾಳೆ ದೆಹಲಿಗೆ ತೆರಳಿ ಖರ್ಗೆ ಅವರನ್ನು ಭೇಟಿ ಮಾಡಿ ಈ ಆಹ್ವಾನ ನೀಡಲಿದ್ದಾರೆ.
ಖರ್ಗೆ ಭೇಟಿ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ದೆಹಲಿಯಲ್ಲೇ ಬಿಡಾರ ಹೂಡಿದ್ದಾರೆ, ಇವರ ಜೊತೆ ಉಳಿದವರು ಸೇರಿಕೊಂಡು ಖರ್ಗೆ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಆದರೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೊರೆಯಬಹುದಾದ ನಾಯಕತ್ವ ಸಾಧ್ಯತೆಗೆ ಶೆಡ್ಡು ಹೊಡೆದಿರುವ ಇವರುಗಳು, ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ತರಲು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ.
ದಲಿತ ಸಮುದಾಯಕ್ಕೆ ಕರ್ನಾಟಕದಲ್ಲಿ ಆಡಳಿತದ ನಾಯಕತ್ವ ಧಕ್ಕಿಸಿಕೊಳ್ಳುವ ಅವಕಾಶ ಮುಂದೆ ದೊರೆಯದು, ಈಗ ಸಿಕ್ಕಿರುವ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಪಟ್ಟ ಪಡೆಯಲೇಬೇಕು.

ರಾಜ್ಯ ರಾಜಕಾರಣಕ್ಕೆ ಬನ್ನಿ
ನೀವು ಈ ನಾಯಕತ್ವ ವಹಿಸಿಕೊಳ್ಳಲು ರಾಜ್ಯ ರಾಜಕಾರಣಕ್ಕೆ ಮತ್ತೆ ಬನ್ನಿ, ನಿಮಗೆ ಎಲ್ಲರ ಬೆಂಬಲ ದೊರೆಯಲಿದೆ, ಹಿಂದೆ ಮೂರು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದೆ, ಈ ಬಾರಿ ಅದನ್ನು ಕಳೆದುಕೊಳ್ಳಬೇಡಿ ಎಂದು ಖರ್ಗೆ ಅವರಿಗೆ ದುಂಬಾಲು ಬೀಳಲಿದ್ದಾರಂತೆ.
ಪಕ್ಷ ಸಂಘಟನೆ ದೃಷ್ಟಿಯಿಂದ ನಾವು ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನಕ್ಕೂ ಮುನ್ನ ನಾಲ್ಕು ವಿಭಾಗಗಳಲ್ಲಿ ದಲಿತ ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಲಿದ್ದಾರೆ.
ಈ ಹಿಂದೆ, ಇಂತಹ ಸಮಾವೇಶ ನಡೆಸಲು ಪರಿಶಿಷ್ಟ ಜಾತಿ ಮತ್ತು ವರ್ಗದ ಶಾಸಕರು ಮತ್ತು ಮುಖಂಡರು ಸಭೆ ನಡೆಸಲು ಮುಂದಾದಾಗ ವರಿಷ್ಠರು ತಡೆ ನೀಡಿದ್ದರು.
ಎಚ್ಚರಿಕೆಯನ್ನೂ ನೀಡಿದ್ದರು
ಅಷ್ಟೇ ಅಲ್ಲ, ಕೊಟ್ಟಿರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಿ ಎಂದು ಖರ್ಗೆ ಅವರೇ ಈ ಸಚಿವರುಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು.
ಇದೀಗ ಖರ್ಗೆ ಅವರ ಮನವೊಲಿಸಿ ಸಮಾವೇಶ ನಡೆಸಲು ಸಚಿವರುಗಳು ದೆಹಲಿ ದಂಡಯಾತ್ರೆ ಕೈಗೊಳ್ಳುತ್ತಿದ್ದಾರೆ.
ಮುಡಾ ಹಗರಣವನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಿಸುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಈ ಬೆಳವಣಿಗೆ ಕಂಡುಬರುತ್ತಿದೆ.