ಬೆಂಗಳೂರು:ಮೈಸೂರಿನ ಉದಯಗಿರಿಯಲ್ಲಿ ನಡೆದಿರುವ ಪುಂಡರ ಗುಂಪಿನ ಅಟ್ಟಹಾಸ, ರಾಜ್ಯದ ಕಾನೂನು ಸುವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡುವ ವಿಧ್ವಂಸಕ ಶಕ್ತಿಗಳ ಪ್ರದರ್ಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಅಲ್ಪಸಂಖ್ಯಾತರ ಓಲೈಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆದ್ಯತೆ ಎಂಬಂತೆ ನಡೆದುಕೊಳ್ಳುತ್ತಿರುವ ಧೋರಣೆ ಮತೀಯವಾದಿ ಪುಂಡ-ಪೋಕರಿಗಳಿಗೆ ರಹದಾರಿ ಕೊಟ್ಟಂತಾಗಿದೆ.
ಕೋಮುವಾದಿ ರಕ್ಕಸ ವರ್ತನೆ ಸಮರ್ಥಿಸುವ ರೀತಿಯಲ್ಲಿ ಸಚಿವ ಕೆ.ಎನ್.ರಾಜಣ್ಣ, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ರೀತಿ ಘಟನೆಯನ್ನು ವ್ಯಾಖ್ಯಾನಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ನಿರಂತರ ಕ್ರೌರ್ಯ
ಎನ್.ಆರ್.ಕ್ಷೇತ್ರದ ಉದಯಗಿರಿ ಠಾಣಾ ವ್ಯಾಪ್ತಿ ಹಿಂದಿನಿಂದಲೂ ಮುಸ್ಲಿಂ ಸಮುದಾಯ ಬಾಹುಳ್ಯ ಪ್ರದೇಶವಾಗಿದ್ದು, ಮತೀಯ ದುಷ್ಕರ್ಮಿಗಳು ನಿರಂತರವಾಗಿ ಕ್ರೌರ್ಯ ಮೆರೆಯುತ್ತಿದ್ದಾರೆ, ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟು ಬಲಿಷ್ಠರಾಗಿದ್ದಾರೆ, ಅಲ್ಲದೆ, ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳೂ ಈ ವ್ಯಾಪ್ತಿಯಲ್ಲಿ ಹಿಂದೆ ನಡೆದಿವೆ ಎಂದಿದ್ದಾರೆ.
ಇಷ್ಟಾಗಿಯೂ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಯಾವ ಕ್ರಮವನ್ನೂ ಕಾಂಗ್ರೆಸ್ ಸರ್ಕಾರ ಕೈಗೊಂಡಿಲ್ಲ, ಬದಲಾಗಿ ವಿಧ್ವಂಸಕ ಚಟುವಟಿಕೆ ತಾಣವಾಗಿ ಪೋಷಿಸುತ್ತಿದೆ, ಇದರ ಪರಿಣಾಮ ಕ್ಷುಲ್ಲಕ ಕಾರಣಕ್ಕೂ ಕಿಡೆಗೇಡಿಗಳೆಲ್ಲ ಒಟ್ಟುಗೂಡಿ ದಂಗೆ ಎದ್ದು ಪೊಲೀಸರಿಗೆ ಸವಾಲೆಸೆದಿದ್ದಾರೆ.
ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಮು ಪಕ್ಷಪಾತ ಧೋರಣೆ ಬದಿಗಿಟ್ಟು ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದರೆ ಶಾಂತಿ, ಸುವ್ಯವಸ್ಥೆಗೆ ಹೆಸರಾದ ಮೈಸೂರು ಕೋಮು ದಳ್ಳುರಿಗೆ ಸಿಲುಕುವ ಅಪಾಯಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ.

ಪ್ರಕರಣಗಳ ವಾಪಸ್ ಕಾರಣ
ಈ ಸಂಬಂಧ ಟ್ವೀಟ್ ಮಾಡಿರುವ ಅವರುಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತ ಸಮುದಾಯದ ಗಲಭೆಕೋರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆದಿರುವುದು, ಗಲಭೆಕೋರರಿಗೆ ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಬಂದಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆ, ಹುಬ್ಬಳ್ಳಿಯಂತೆ ಮೈಸೂರಿನಲ್ಲೂ ಪೊಲೀಸರ ಮೇಲೆ ಹಲ್ಲೆ ನಡೆದಿದೆ, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಅಖಿಲೇಶ್ ಯಾದವ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದನ್ನು ಪ್ರತಿಭಟಿಸಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಹಿಂದೂ ಸಮುದಾಯದವರಿಗೆ ಬೆದರಿಕೆ ಹಾಕಲಾಗಿದ್ದು, ಮೈಸೂರಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಠಾಣೆ ಧ್ವಂಸ ಮಾಡುವ ಧೈರ್ಯ
ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧದ ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್ ಪಡೆದಿರುವುದು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಇದು ಅಲ್ಪಸಂಖ್ಯಾತರ ಸರ್ಕಾರ ಎಂಬಂತಹ ಹೇಳಿಕೆಗಳು ಗಲಭೆಕೋರರಲ್ಲಿ ಪೊಲೀಸ್ ಠಾಣೆಯನ್ನೂ ಧ್ವಂಸ ಮಾಡಬಹುದೆಂಬ ಧೈರ್ಯ ತಂದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಒಂದಡೆ ಆರ್ಥಿಕ ದುಸ್ಥಿತಿ ಇದ್ದರೆ, ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗಲಭೆ ಎಸಗುವವರ ವಿರುದ್ಧ ಪ್ರಕರಣ ದಾಖಲಿಸಿದರೂ, ವ್ಯರ್ಥ ಎಂಬುದು ಪೊಲೀಸರಿಗೂ ಮನವರಿಕೆ ಆದಂತಿದೆ.
ಗಲಭೆಕೋರರಿಗೆ ಪೊಲೀಸರ ಭಯವೇ ಇಲ್ಲವೆಂದರೆ ರಾಜ್ಯದಲ್ಲಿ ಕಾನೂನು ಸತ್ತಿದೆ ಎಂದರ್ಥ, ಮತಬ್ಯಾಂಕ್‌ಗಾಗಿ ಇಡೀ ವ್ಯವಸ್ಥೆ ಹಾಳು ಮಾಡಲಾಗುತ್ತಿದೆ.
ನಮ್ಮೆಲ್ಲರ ಜವಾಬ್ದಾರಿ
ಮೈಸೂರಿನ ಹಿಂದೂಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಮಾತನಾಡಿದ್ದು, ಗಲಭೆಕೋರರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಕೈಚೆಲ್ಲಿ ಕುಳಿತಿರುವುದರಿಂದ ನಾವೇ ಶಾಂತಿ ಕಾಪಾಡಬೇಕಿದೆ.
ಕೆಎಫ್‌ಡಿ, ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳು ಮೈಸೂರಿನಲ್ಲಿ ಸಕ್ರಿಯವಾಗಿವೆ, ಕೇರಳದಿಂದ ಬಂದು ಕೊಲೆ, ಅಪಹರಣ ಮಾಡಿ ಹೋಗಿರುವ ಘಟನೆಗಳು ನಡೆದಿವೆ ಎಂದರು.
ಕಾಂಗ್ರೆಸ್ ಶಾಸಕರಿಗೆ ಬೇರೆ ಆದಾಯವಿಲ್ಲದೆ ವರ್ಗಾವಣೆ, ಮರಳು ಮಾಫಿಯಾ ಮೂಲಕ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ, ಭದ್ರಾವತಿಯಲ್ಲೂ ಇಂಥದ್ದೇ ಘಟನೆ ನಡೆದಿದೆ, ಬೇರೆ ಜಿಲ್ಲೆಗಳಲ್ಲೂ ಅಧಿಕಾರಿಗಳಿಗೆ ಆಡಳಿತಾರೂಢ ಶಾಸಕರಿಂದ ಬೆದರಿಕೆ ಇದೆ, ಮಂಡ್ಯ, ಬೀದರ್, ಯಾದಗಿರಿ ಮೊದಲಾದೆಡೆ ಮರಳು ಮಾಫಿಯಾ ನಡೆಯುತ್ತಿದೆ, ಭದ್ರಾವತಿಯ ಮಹಿಳಾ ಅಧಿಕಾರಿ ಘಟನೆ ದಾಖಲಿಸಿಕೊಂಡು ಧೈರ್ಯವಾಗಿ ಮಾತನಾಡಿದ್ದಾರೆ, ಇತರೆ ಜಿಲ್ಲೆಗಳ ಅಧಿಕಾರಿಗಳು ವರ್ಗಾವಣೆ ಭಯದಿಂದ ಮಾತನಾಡುತ್ತಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತು ಉಲ್ಲಂಘಿಸಿ ಕುಂಭಮೇಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದು, ಯಾರನ್ನು ಅನುಸರಿಸಬೇಕು ಎಂಬ ಗೊಂದಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.