ಇನ್ವೆಸ್ಟರ್ ಸಮ್ಮಿಟ್: ಯುವಜನರ ಆಕರ್ಷಣೆಯಾದ ನಾವೀನ್ಯತೆ
ಬೆಂಗಳೂರು: ‘ಫ್ಯೂಚರ್ ಆಫ್ ಇನ್ನೋವೇಶನ್’ ಎಕ್ಸ್-ಪೋಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದು ಚಾಲನೆ ನೀಡಿದರು.
ಕರ್ನಾಟಕ ಪೆವಿಲಿಯನ್, ಟೊಯೋಟಾ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ, ಡ್ರೋನ್ ತಂತ್ರಜ್ಞಾನದ ವೈಶಿಷ್ಟ್ಯಪೂರ್ಣ ಹಂತಗಳನ್ನು ವೀಕ್ಷಿಸಿದರಲ್ಲದೆ, ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯ ಆಶಾಕಿರಣವಾಗಿರುವ ಅಗ್ರಿ-ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದ ರೋಗಪತ್ತೆ ಮತ್ತು ಚಿಕಿತ್ಸೆಗಳಲ್ಲಿನ ಆರೋಗ್ಯಸೇವೆ ತಂತ್ರಜ್ಞಾನಗಳ ಬಗ್ಗೆಯೂ ಮಾಹಿತಿ ಪಡೆದರು.

ಆಧುನಿಕ ತಂತ್ರಜ್ಞಾನ ಧಾರೆ
ನಂತರ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಜಾಗತಿಕ ಮಟ್ಟದ ಕಂಪನಿಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳೂ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಡ್ರೋನ್, ಬಾಹ್ಯಾಕಾಶ, ಕೃಷಿ, ಆರೋಗ್ಯ, ಉತ್ಪಾದನಾ ವಲಯ, ವೈಮಾಂತರಿಕ್ಷ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿನ ಆಧುನಿಕ ತಂತ್ರಜ್ಞಾನ ಧಾರೆಗಳನ್ನು ಕಾಣಬಹುದಾಗಿದೆ ಎಂದರು.
ಮರುಬಳಕೆ ಇಂಧನ, ಸೆಮಿಕಂಡಕ್ಟರ್, ವಿದ್ಯುಚ್ಚಾಲಿತ ವಾಹನಗಳು ಮತ್ತು ಸುಸ್ಥಿರ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಕಂಪನಿಗಳು ಪಾಲ್ಗೊಂಡಿವೆ, ರಾಜ್ಯದ ಸಾಧನೆ ಬಿಂಬಿಸುವ ಪ್ರತ್ಯೇಕ ‘ಕರ್ನಾಟಕ ಪೆವಿಲಿಯನ್’ನಲ್ಲಿ ಕ್ವಿನ್ ಸಿಟಿ, ಫ್ಲೈಯಿಂಗ್ ವೆಡ್ಜ್, ಬೆಲ್ಲಾ ಟ್ರಿಕ್ಸ್, ಸ್ಕೀಸರ್ವ್, ಫ್ಲಕ್ಸ್ ಆಟೋ ಮುಂತಾದ ಉದ್ಯಮಗಳಿವೆ.
ಜಾಗತಿಕ ಮಟ್ಟದ ಜಿ.ಇ. ಹೆಲ್ತ್‌ಕೇರ್, ಹೀರೋ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಪ್ರಮುಖ ಕಂಪನಿಗಳಾಗಿವೆ ಎಂದರು.

ಭಾರತದ ನಾಯಕತ್ವದ ಸರದಿ
ಸಮಾವೇಶದಲ್ಲಿ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ‘ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ವಿಷಯ ಕುರಿತು ಮಾತನಾಡಿದ ಕ್ಷೇತ್ರದ ದಿಗ್ಗಜ ಉದ್ಯಮಪತಿಗಳು, ಸೆಮಿಕಂಡಕ್ಟರ್ ಕ್ಷೇತ್ರಸಹಿತ ಎಲ್ಲಾ ಕೈಗಾರಿಕೆಗಳಿಗೆ ಬಂಡವಾಳ ಆಕರ್ಷಿಸುವ ಜೊತೆಗೆ ಪ್ರತಿಭೆ ಮತ್ತು ಸಾಮರ್ಥ್ಯ ಎರಡನ್ನೂ ಸೃಷ್ಟಿಸಲು ಸಾಧ್ಯವಾದರೆ ಹೂಡಿಕೆ ತಾನಾಗೇ ಹರಿದುಬರುತ್ತದೆ ಎಂಬ ಅಭಿಮತ ವ್ಯಕ್ತಪಡಿಸಿದರು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ ಹತ್ತು ವರ್ಷ ಭಾರತದ್ದಾಗಿದೆ, ಕ್ಷೇತ್ರದ ಈಗಿನ 40 ಬಿಲಿಯನ್ ಡಾಲರ್ ವಹಿವಾಟು 400 ಬಿಲಿಯನ್ ಡಾಲರ್ ಮೀರಲಿದೆ, ಆದರೆ, ಶಿಕ್ಷಣ ರಂಗದಲ್ಲಿ ಗುಣಮಟ್ಟದ ಬೋಧಕರು, ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆ ಕಡೆಗೂ ಆದ್ಯ ಗಮನ ನೀಡಬೇಕಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ರಾಷ್ಟ್ರೀಯ ಸಮಸ್ಯೆಗಳಿಗೆ ದಕ್ಷ ಪರಿಹಾರ ಕಂಡುಹಿಡಿಯುವ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ.
5 ಟ್ರಿಲಿಯನ್ ಡಾಲರ್ ಆರ್ಥಿಕತೆ
ಭಾರತವನ್ನು ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸುವ ಗುರಿ ಇದೆ, ಇದರಲ್ಲಿ 3 ಟ್ರಿಲಿಯನ್ ಡಾಲರ್ ಇಎಸ್‌ಡಿಎಂ ಕೊಡುಗೆಯೇ ಇರಲಿದೆ, ಅವಕಾಶಗಳು ಕೇವಲ ಭಾರತಕ್ಕೆ ಮಾತ್ರ ಇರುವುದಿಲ್ಲ, ಎಲ್ಲ ದೇಶಗಳಿಗೂ ಲಭ್ಯವಿರುತ್ತವೆ, ಅವುಗಳ ಲಾಭ ಪಡೆಯಲು ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಡೆಗೆ ಗಮನ ಕೊಡಬೇಕಿದೆ ಎಂದರು.
ಸೆಮಿಕಂಡಕ್ಟರ್ ಕ್ಷೇತ್ರದ ಚಿಪ್ ವಿನ್ಯಾಸದಲ್ಲಿ ಭಾರತದ ಪಾಲು ಶೇಕಡ 25ರಷ್ಟಿದೆ, ಉತ್ಪಾದನೆಯಲ್ಲಿ ಹಿಂದಿದ್ದೇವೆ, ಮುಂದಿನ 5-10 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳನ್ನೂ ಆವರಿಸಲಿದೆ, ಆಗ 15-20 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ‘ಪರ್ಸನಲ್ ಡಿಸೈನ್’ ಪರಿಣತಿ ಮುನ್ನೆಲೆಗೆ ಬರಲಿದೆ.
ಜಗತ್ತಿನ ದೊಡ್ಡ ದೊಡ್ಡ ಆರ್ಥಿಕತೆಗಳೆಲ್ಲವೂ ಸೆಮಿಕಂಡಕ್ಟರ್ ಕ್ಷೇತ್ರವನ್ನೇ ನೆಚ್ಚಿಕೊಂಡಿವೆ, ತೈವಾನ್ ಮತ್ತು ಜಪಾನಿನಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಸಮೃದ್ಧವಾಗಿದೆ, ನಮ್ಮಲ್ಲಿ ಸೆಮಿಕಂಡಕ್ಟರ್ ವಲಯಕ್ಕೆ ಇಂಬು ಕೊಡುವಂತಹ ಕಾರ್ಯ ಪರಿಸರ ಪೂರ್ಣ ಪ್ರಮಾಣದಲ್ಲಿ ಸೃಷ್ಟಿಯಾಗಿಲ್ಲ ಎಂದರು.
ಬೆಂಗಳೂರಿನಲ್ಲೇ ನ್ಯಾನೊ ಚಿಪ್
ಇಪ್ಪತ್ತು ವರ್ಷಗಳ ಹಿಂದೆ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಶನ್) ತಂತ್ರಜ್ಞಾನ ಬಂದಾಗ ಬಳಕೆದಾರರೇ ಇರಲಿಲ್ಲ, ಇದಕ್ಕಾಗಿ ಹತ್ತು ವರ್ಷ ಕಾಯಬೇಕಾಯಿತು, ಈಗ ಬೆಂಗಳೂರಿನಲ್ಲೇ ನ್ಯಾನೊ ಮೀಟರ್ ಲೆಕ್ಕದಲ್ಲಿ ಚಿಪ್ ವಿನ್ಯಾಸಗಳು ಸಿದ್ಧವಾಗುತ್ತಿದ್ದು, ಇದೇ ತಂತ್ರಜ್ಞಾನದ ಶಕ್ತಿಯಾಗಿದೆ.
ಕರ್ನಾಟಕದ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ನವೋದ್ಯಮಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಗೆ ಅಪಾರ ಅವಕಾಶಗಳಿವೆ.
ಭಾರತ, ಅದರಲ್ಲೂ ಕರ್ನಾಟಕ ಸಾಫ್ಟ್ ವೇರ್ ಆಡುಂಬೊಲಗಳಾಗಿವೆ, ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ತುಂಬಾ ಸಂಶೋಧನೆಗಳು ನಡೆಯುತ್ತಿವೆ, ಇವುಗಳಿಗೆ ತಕ್ಕ ಮಾರುಕಟ್ಟೆ ಸೃಷ್ಟಿಸುವ ಅನ್ವಯಿಕತೆ ಕೊರತೆ ನಮ್ಮಲ್ಲಿ ಕಾಣುತ್ತಿದೆ, ಇದರೊಂದಿಗೆ ಹೆಚ್ಚು ಹೆಚ್ಚು ಸಹಭಾಗಿತ್ವಕ್ಕೆ ಉತ್ತೇಜನ ಸಿಗುವಂತಾಗಬೇಕು, ಇಲ್ಲವಾದರೆ, ಉದ್ಯಮದ ಬೆಳವಣಿಗೆ ಕುಂಟುತ್ತ ಸಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದರು.
ಉದ್ಯಮ ಪರಿಣಿತರು
ಉದ್ಯಮ ಪರಿಣಿತರಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಿಇಒ ಸಂತೋಷಕುಮಾರ್, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಉಪಾಧ್ಯಕ್ಷ ಹಿತೇಂದ್ರ ಗಾರ್ಗ್ ಮತ್ತು ಗ್ಲೋಬಲ್ ಫ್ಯಾಬ್ ಎಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಛಡ್ಡಾ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡರು.
ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ನಾವೀನ್ಯತೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಯುವಜನರ ಗಮನ ಸೆಳೆಯುತ್ತಿದೆ.