ಬೆಂಗಳೂರು:ಹೊಸಕೋಟೆಯಲ್ಲಿನ ಸ್ವೀಡನ್ ಮೂಲದ ವೋಲ್ವೊ ಕಂಪನಿಯ ಬಸ್ ಮತ್ತು ಟ್ರಕ್ ತಯಾರಿಕಾ ಸ್ಥಾವರ ವಿಸ್ತರಣೆಗೆ 1,400 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಒಡಂಬಡಿಕೆಗೆ ಇಂದು ಸಹಿ ಹಾಕಲಾಯಿತು.
ಒಡಂಬಡಿಕೆಗೆ ಸಹಿ
ಒಡಂಬಡಿಕೆಗೆ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ವೋಲ್ವೊ ಇಂಡಿಯಾ ಪರ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಮಾಡಿದರು.
ನಗರದಲ್ಲಿ ನಡೆಯತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವೊಲ್ವೊ ಸಂಸ್ಥೆ ಸಕ್ರಿಯವಾಗಿ ಪಾಲ್ಗೊಂಡಿದ್ದು ಇದರ ಅಂಗವಾಗಿ ಪ್ರಮುಖ ಒಪ್ಪಂದಕ್ಕೆ ಸಹಿ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, 25 ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿರುವ ವೋಲ್ವೋ ಕಂಪನಿ ಬಂಡವಾಳ ಹೂಡಿಕೆಗೆ ನಾಂದಿ ಹಾಡಿದೆ, ವೋಲ್ವೊ ಉತ್ಕೃಷ್ಟ ಗುಣಮಟ್ಟದ ಬಸ್‌ಗಳ ತಯಾರಿಕೆಗೆ ಹೆಸರು ಪಡೆದಿದೆ ಎಂದರು.
ಸರ್ಕಾರದ ನೆರವು
ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿನ ಐಷಾರಾಮಿ ಬಸ್‌ಗಳನ್ನು ಜನತೆ ವೋಲ್ವೊ ಹೆಸರಿನಿಂದಲೇ ಗುರುತಿಸುತ್ತಾರೆ, ಕಂಪನಿಗೆ ಅಗತ್ಯ ಸೌಲಭ್ಯ ಮತ್ತು ನೆರವನ್ನು ಸರ್ಕಾರ ಒದಗಿಸಲಿದೆ, ಕಂಪನಿ ತನ್ನ ಘಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು, ಇದರಿಂದ ಸ್ಥಳೀಯರ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಯನ್ನೂ ಸಾಧಿಸಬಹುದಾಗಿದೆ ಎಂದರು.
ವೋಲ್ವೊ ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಮಾತನಾಡಿ, ಕಂಪನಿ ಕರ್ನಾಟಕದ ಪೀಣ್ಯ, ಹೊಸಕೋಟೆ ಮತ್ತು ಧಾರವಾಡ ಬಳಿಯ ಪೀತಂಪುರದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದ್ದು, ಪ್ರಸ್ತುತ ವರ್ಷಕ್ಕೆ 3,000 ಬಸ್ ಮತ್ತು ಟ್ರಕ್‌ಗಳನ್ನು ತಯಾರಿಸಲಾಗುತ್ತಿದೆ ಎಂದರು.
ಹೊಸಕೋಟೆ ಸ್ಥಾವರ ವಿಸ್ತರಣೆಯಿಂದ ವರ್ಷಕ್ಕೆ 20 ಸಾವಿರ ಬಸ್ ಮತ್ತು ಟ್ರಕ್‌ಗಳನ್ನು ತಯಾರಿಸಬಹುದಾಗಿದ್ದು, ಇದರಿಂದ ಸಾಮರ್ಥ್ಯ ವೃದ್ಧಿ ಹಾಗೂ ಉದ್ಯೋಗಸೃಷ್ಟಿಯೂ ಆಗಲಿದೆ.
ಜಾಗತಿಕ ಪೂರೈಕೆ
ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮತ್ತು ಕರ್ನಾಟಕದ ಸ್ಥಾನ ಮತ್ತಷ್ಟು ಸುಭದ್ರವಾಗಲಿದೆ, ಅಲ್ಲದೆ, ಸ್ಥಳೀಯ ಮಾರುಕಟ್ಟೆ ಅಗತ್ಯಗಳನ್ನೂ ಸುಲಭವಾಗಿ ಪೂರೈಸಲು ಸಾಧ್ಯವಾಗಲಿದೆ.
ವೋಲ್ವೋ ಕಂಪನಿಗೆ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ೪ನೇ ಅತಿದೊಡ್ಡ ತಾಣವಾಗಿದೆ, ಇಲ್ಲಿನ ಜಿಸಿಸಿ ಕೇಂದ್ರದಲ್ಲಿ 3,500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು, ಆರ್ ಅಂಡ್ ಡಿ, ಐಟಿ, ಖರೀದಿ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆ ಸಹಾ ನಿರ್ವಹಿಸಲಾಗುತ್ತಿದೆ, ಅಲ್ಲದೆ ಮಧ್ಯಪ್ರದೇಶದಲ್ಲೂ ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಲ್ಲಿದ್ದು, ಕಂಪನಿಯ ವಾರ್ಷಿಕ ವಹಿವಾಟು 50 ಬಿಲಿಯನ್ ಡಾಲರ್ ದಾಟಿದೆ ಎಂದರು.