ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ಬಹುತೇಕ ತೆರೆ ಎಳೆದಿರುವ ಪಕ್ಷದ ವರಿಷ್ಠರು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕರ ಬದಲಾವಣೆ ಮಾಡದಿರಲು ತೀರ್ಮಾನಿಸಿದ್ದಾರೆ.
ಆದರೆ, ಪಕ್ಷದ ಕಾರ್ಯಕಾರಿ ಮತ್ತು ಕೋರ್ ಕಮಿಟಿಯಲ್ಲಿ ಸಣ್ಣ-ಪುಟ್ಟ ಬದಲಾವಣೆ ಮಾಡಲು ಸೂಚಿಸಿದ್ದು, ಕೆಲವರನ್ನು ಕೈಬಿಟ್ಟು, ಮತ್ತೆ ಕೆಲವರ ಸೇರ್ಪಡೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ.
ಕೋರ್ ಕಮಿಟಿ ಹಾಗೂ ಪದಾಧಿಕಾರಿಗಳ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಿರುವ ವರಿಷ್ಠರು ಯಾರನ್ನು ಸೇರ್ಪಡೆ ಮಾಡಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.

ಬೆಳವಣಿಗೆ ನಂತರ ಪ್ರತಿಕ್ರಿಯೆ
ವರಿಷ್ಠರ ತೀರ್ಮಾನದ ಹಿನ್ನೆಲೆಯಲ್ಲಿ ವಿಜಯೇಂದ್ರ ಪರ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಬಣ, ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೀಡಿರುವ ನೋಟಿಸ್ ಬಗೆಗಿನ ಬೆಳವಣಿಗೆ ನಂತರ ಪ್ರತಿಕ್ರಿಯಿಸಲು ಕಾಯುತ್ತಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ವರಿಷ್ಠರೊಂದಿಗೆ ಸಮಾಲೋಚನೆಯಲ್ಲಿದ್ದು, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರಾಜ್ಯದಲ್ಲಿನ ಪಕ್ಷದ ಇತ್ತೀಚಿನ ವಿದ್ಯಮಾನಗಳ ಕುರಿತು ಮಾಹಿತ ನೀಡಲಿದ್ದಾರೆ.
ರಾಜ್ಯಾಧ್ಯಕ್ಷರಾಗಿ ನೀವು ಎಲ್ಲರನ್ನೂ ವಿಶ್ವಾಸದಿಂದ ಕೊಂಡೊಯ್ದು ಪಕ್ಷ ಸಂಘಟಿಸುವಂತೆ ವಿಜಯೇಂದ್ರ ಅವರಿಗೆ ವರಿಷ್ಠರು ಕಿವಿಮಾತು ಹೇಳಿದ್ದಾರೆ.
ಏಕಪಕ್ಷೀಯ ನಿರ್ಧಾರ ಬೇಡ
ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರ ಮಾರ್ಗದರ್ಶನ ಪಡೆದುಕೊಳ್ಳಬೇಕು, ಅಲ್ಲದೆ, ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು, ಯಾವುದೇ ಪರಿಸ್ಥಿತಿಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂಬ ಸಲಹೆ ಮಾಡಿದ್ದಾರೆ.
ವರಿಷ್ಠರ ಸಲಹೆಗೆ ಸಮ್ಮತಿಸಿರುವ ವಿಜಯೇಂದ್ರ, ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವರಿಷ್ಠರ ಸೂಚನೆಯಂತೆ ಬದಲಾವಣೆಗೂ ಒಪ್ಪಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವರಿಷ್ಠರ ನಿರ್ಧಾರದಿಂದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಪ್ರಯತ್ನದಲ್ಲಿದ್ದ ಬಸನಗೌಡ ಪಾಟೀಲ್ ಬಣದ ನಾಯಕರಿಗೆ ಮುಖಭಂಗವಾಗಿದೆ.
ಭಿನ್ನರ ಆಸೆಗೆ ತಣ್ಣೀರು
ವಿಜಯೇಂದ್ರ ಸ್ಥಾನಕ್ಕೆ ತಮ್ಮ ಮಾತಿಗೆ ಇಂಬು ಕೊಡುವಂತಹ ನಾಯಕರನ್ನು ತರಬೇಕೆಂಬ ಭಿನ್ನರ ಆಸೆಗೆ ಸದ್ಯಕ್ಕೆ ತಣ್ಣೀರು ಎರಚಿದಂತಾಗಿದೆ.
ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ತಮ್ಮ ಹಠವನ್ನೇ ಸಾಧಿಸುತ್ತಿದ್ದು, ತಮಗೆ ಯಾವುದೇ ನೋಟಿಸ್ ಬಂದಿಲ್ಲ, ಬಂದರೂ ಹೆದರುವುದಿಲ್ಲ ಎಂಬ ಉಡಾಫೆ ಮಾತುಗಳನ್ನೇ ಆಡುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ವಿಜಯೇಂದ್ರ ಬಣ ಗಮನಿಸುತ್ತದೆ.