ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಅಧಿಕಾರ ಚುಕ್ಕಾಣಿ ನೀಡಿದರೆ, ತಾವು ಅವರ ಕೈಕೆಳಗೆ ಕೆಲಸ ಮಾಡುವುದಿಲ್ಲ, ಪಕ್ಷ ತೊರೆಯಬೇಕಾಗುತ್ತದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೇರವಾಗಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ರಾಜಣ್ಣ ಇಂದು ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ತಮ್ಮ ಬಣದ ನಿಲುವೇನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಹಂಚಿಕೆ ಮಾಹಿತಿ ಇಲ್ಲ
ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ನಮಗೆ ಪೂರ್ಣ ಮಾಹಿತಿ ಇಲ್ಲ, ಆದರೆ, ಉಪಮುಖ್ಯಮಂತ್ರಿ ಅವರು, ಮುಖ್ಯಮಂತ್ರಿ ಗಾದಿಗೇರಲು ವೇದಿಕೆ ಸೃಷ್ಟಿ ಮಾಡಿಕೊಂಡಂತಿದೆ.
ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಿರುವುದಕ್ಕೆ ನಮ್ಮ ಅಭ್ಯಂತರ ಇಲ್ಲ, ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ಬದಲಾವಣೆ ಮಾಡಿದರೆ, ಅಂತಹ ಸಂದರ್ಭದಲ್ಲಿ ನೀವೇ ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಖರ್ಗೆ ಅವರಿಗೆ ಆಹ್ವಾನ ನೀಡಿದ್ದಾರೆ.
ರಾಜ್ಯ ಮತ್ತು ಪಕ್ಷಕ್ಕಾಗಿ ನೀವು ದುಡಿದಿದ್ದೀರಿ, ನಿಮಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಹೋಗಿದೆ.

ರಾಜ್ಯ ರಾಜಕಾರಣಕ್ಕೆ ಬನ್ನಿ
ಇದೀಗ ಮತ್ತೆ ಅಂತಹ ಅವಕಾಶ ನಿಮ್ಮ ಕಾಲ ಬಳಿಗೆ ಬಂದಿದೆ, ನೀವು ಅದನ್ನು ದಿಕ್ಕರಿಸದೆ ರಾಜ್ಯ ರಾಜಕಾರಣಕ್ಕೆ ಬಂದರೆ, ಸಿದ್ದರಾಮಯ್ಯ ಅವರೂ ಒಪ್ಪಲು ಸಿದ್ಧರಿದ್ದಾರೆ.
ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಎಐಸಿಸಿ ಆಸಕ್ತಿ ತೋರಿದಂತಿದೆ, ಒಂದು ವೇಳೆ ಅಂತಹ ಸನ್ನಿವೇಶ ಬಂದರೆ, ನಾವುಗಳು ಅವರ ಕೈಕೆಳಗೆ ಕೆಲಸ ಮಾಡುವುದಿಲ್ಲ.
ಶಿವಕುಮಾರ್ ನಾಯಕತ್ವ ವಿರೋಧಿಸಿ 40 ರಿಂದ 60 ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ರಾಜಕೀಯ ಭವಿಷ್ಯದ ಸಿದ್ಧತೆ
ನನ್ನನ್ನೂ ಸೇರಿದಂತೆ, ನಿಮ್ಮ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಮಾತ್ರ ಈ ಶಾಸಕರು ಮುಂದುವರೆಯುತ್ತಾರೆ, ಇಲ್ಲವಾದಲ್ಲಿ, ಅವರು ತಮ್ಮ ರಾಜಕೀಯ ಭವಿಷ್ಯ ನೋಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಶಾಸಕರ ಮನಃಸ್ಥಿತಿಯನ್ನು ನಿಮ್ಮ ಮುಂದಿಟ್ಟಿದ್ದೇನೆ, ಉಳಿದಿದ್ದು, ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ರಾಜಣ್ಣ ದೆಹಲಿ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವರಿಷ್ಠರನ್ನು ಭೇಟಿ ಮಾಡಿ ಶಿವಕುಮಾರ್ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧ
ಖರ್ಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಕೆಪಿಸಿಸಿ ಅಧ್ಯಕ್ಷನಾಗಲು ನಾನು ಸಿದ್ಧ, ಸದ್ಯಕ್ಕೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ, ಹೈಕಮಾಂಡ್ ಅವಕಾಶ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯಿಸುತ್ತಿಲ್ಲ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವೇಳೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆ ನೀಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ, ಶಿವಕುಮಾರ್ ಉಪಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು.
ಅಲ್ಲದೆ, ಲೋಕಸಭಾ ಚುನಾವಣೆವರೆಗೂ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ ಎಂದಿದ್ದರು, ಚುನಾವಣೆ ನಂತರವೂ ಈವರೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಏಕೆ ಆಗಿಲ್ಲ ಎಂದು ಕೇಳುತ್ತಿದ್ದೇವೆ ಎಂದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ
ದಲಿತ ಮುಖ್ಯಮಂತ್ರಿ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, ದಲಿತ ಮುಖ್ಯಮಂತ್ರಿ ಬೇಡುವುದರಲ್ಲಿ ತಪ್ಪೇನು, ಇತರೆ ಸಮುದಾಯ ಮತ್ತು ಅಲ್ಪಸಂಖ್ಯಾತರು ಬೇಡಿಕೆ ಇಡಬಹುದಾದರೂ ಹೈಕಮಾಂಡ್ ತೀರ್ಮಾನವೇ ಅಂತಿಮ, ಅದಕ್ಕೆ ಬದ್ಧರಾಗಿರುತ್ತೇವೆ.
ನಮ್ಮ ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಇಡುತ್ತೇವೆ, ವಿರೋಧ ಪಕ್ಷಗಳ ಸಹಾಯ ತೆಗೆದುಕೊಳ್ಳುವುದಿಲ್ಲ ಎಂದರು.
ಡಾ.ಪರಮೇಶ್ವರ್ ಮುಂದಿನ ವಾರ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಒಬ್ಬರ ನಂತರ ಒಬ್ಬರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ರಣತಂತ್ರ ರೂಪಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.