ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಠಕ್ಕರ್ ಕೊಡಲು ಹಾಸನ ಇಲ್ಲವೇ ತುಮಕೂರಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಮೇ ತಿಂಗಳಿನಲ್ಲಿ ನಡೆಸುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 6ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲೇ ಈ ಸಮಾವೇಶ ಜರುಗಲಿದೆ ಎಂದರು.
ಸದ್ಯದಲ್ಲೇ ಸ್ಥಳ ನಿರ್ಧಾರ
ಮಂಡ್ಯ-ತುಮಕೂರು ಮಧ್ಯಭಾಗದಲ್ಲಿ, ಇಲ್ಲವೇ ಹಾಸನದಲ್ಲಿ ನಡೆಸಬೇಕೇ ಎಂಬ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
ಪಕ್ಷ ಮತ್ತು ಸರ್ಕಾರಕ್ಕಿಂತ ತಮ್ಮ ವರ್ಚಸ್ಸು ಮತ್ತು ವ್ಯಕ್ತಿತ್ವ ಬಿಂಬಿಸಿಕೊಳ್ಳಲು ಸಿದ್ದರಾಮಯ್ಯ ಕೆಲವು ತಿಂಗಳ ಹಿಂದೆ ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ, ಅಲ್ಲಿ ನಮಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಅವರ ಎಲ್ಲ ಪ್ರಶ್ನೆಗಳು, ಸಂಶಯಗಳು ಮತ್ತು ಆರೋಪಗಳಿಗೆ ಜನರ ಮುಂದೆಯೇ ಉತ್ತರ ಕೊಡುತ್ತೇವೆ, ನಾವೆಲ್ಲೂ ಓಡಿಹೋಗಿಲ್ಲ, ಕಾರಣಾಂತರಗಳಿಂದ ತಕ್ಷಣಕ್ಕೆ ಉತ್ತರ ಕೊಡಲು ಸಾಧ್ಯವಾಗಿಲ್ಲ ಎಂದರು.
ನೀರಾವರಿಗಾಗಿ ಹೋರಾಟ
ನಾನಿನ್ನೂ ಐದು ವರ್ಷಗಳ ಕಾಲ ಬದುಕಿರುತ್ತೇನೆ, ಅಲ್ಲಿಯವರೆಗೂ ರಾಜಕೀಯವನ್ನೂ ಮಾಡುತ್ತೇನೆ, ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯದ ಉದ್ದಗಲಕ್ಕೆ ನೀರಾವರಿಗಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.
ಗೋದಾವರಿ-ಕೃಷ್ಣ-ಕಾವೇರಿ ನದಿ ಜೋಡಣೆ ಯೋಜನೆಯಿಂದ ನಮಗೆ 25 ಟಿಎಂಸಿ ನೀರು ತರಲು ನನ್ನ ಹೋರಾಟ ಮುಂದುವರೆಸುತ್ತೇನೆ.
ನದಿಗಳ ಜೋಡಣೆಯಿಂದ ಕುಡಿಯುವ ನೀರಲ್ಲದೆ, ಸೊರಗಿರುವ ಹಳೇ ಮೈಸೂರು ಭಾಗದ ಅನೇಕ ಪ್ರದೇಶಗಳಿಗೆ ಜಲ ಮೂಲ ದೊರೆಯುತ್ತದೆ.
ಜನರಿಗಾಗಿ ನದಿಗಳ ಜೋಡಣೆ
ನಾನು ಕಾವೇರಿ ನದಿ ಪಾತ್ರಕ್ಕೆ ಮಾತ್ರ ಹೋರಾಟ ಮಾಡುತ್ತಿಲ್ಲ, ಕುಡಿಯುವ ನೀರಲ್ಲದೆ ಸೊರಗಿರುವ ಜನರಿಗಾಗಿ ನದಿಗಳ ಜೋಡಣೆಯಿಂದ ನೀರು ತರಲು ಹೋರಾಟ ಮುಂದುವರೆಸುತ್ತೇನೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಎರಡು ಬಾರಿ ಪತ್ರ ಬರೆದಿದ್ದೇನೆ, ರಾಜ್ಯಸಭೆಯಲ್ಲೂ ಪ್ರಸ್ತಾಪ ಮಾಡಿದ್ದೇನೆ.
ಇಪ್ಪತ್ತೈದು ಟಿಎಂಸಿ ನೀರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಲೂ ಸಿದ್ಧನಿದ್ದೇನೆ, ಕಾಂಗ್ರೆಸ್‌ನ ನೀರಾವರಿ ಸಚಿವ ಹಾಗೂ ಆ ಪಕ್ಷದ ಸಂಸದರ ಜೊತೆಯೂ ಮಾತನಾಡುತ್ತೇನೆ.
ಎಲ್ಲರೊಂದಿಗೆ ಮಾತನಾಡಲು ಸಿದ್ಧ
ರಾಜಕೀಯ ಬಿಟ್ಟು, ನೀರಿಗಾಗಿ ನಾನು ಎಲ್ಲರ ಜೊತೆಯೂ ಮಾತನಾಡಲು ಸಿದ್ಧನಿದ್ದೇನೆ, ರಾಜ್ಯದ ನೆಲ-ಜಲದ ಬಗ್ಗೆ ಸಂಸತ್‌ನಲ್ಲಿ ನಾನೊಬ್ಬನೇ ಮಾತನಾಡುತ್ತಿಲ್ಲ, ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಗೋವಿಂದ ಕಾರಜೋಳ್ ಮತ್ತು ಡಾ.ಕೆ.ಸುಧಾಕರ್ ಎಲ್ಲರೂ ಹೋರಾಟ ಮಾಡುತ್ತಿದ್ದಾರೆ.
ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುವಂತೆ ಸಚಿವ ಪ್ರಲ್ಹಾದ್ ಜೋಷಿ ಮತ್ತು ಕುಮಾರಸ್ವಾಮಿ ಅವರಿಗೂ ಮನವಿ ಮಾಡುತ್ತೇನೆ ಎಂದರು.