ಬೆಂಗಳೂರು:ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಮೇ ನಂತರ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ.
ಸರ್ಕಾರದ ಈ ಹೇಳಿಕೆಯಿಂದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ಗಳಿಗೆ ಮೂರೂವರೆ ವರ್ಷಗಳ ಆಡಳಿತಾಧಿಕಾರಿಗಳ ಹಿಡಿತದಿಂದ ಮುಕ್ತಿ ದೊರೆಯಲಿದೆ.
ಸ್ಥಳೀಯ ಸಂಸ್ಥೆಗಳಿಗೆ ಕಳೆದ ಮೂರೂವರೆ ವರ್ಷಗಳಿಂದ ಚುನಾವಣೆ ನಡೆಸದಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗನಿಂದನೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ಗೆ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಈ ಮಾಹಿತಿ ನೀಡಿದ್ದಾರೆ.
ಮೀಸಲಾತಿ ಪಟ್ಟಿ ನೀಡಲಿ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿಗೆ ಮೀಸಲಾತಿ ಪಟ್ಟಿಯನ್ನು ಸರ್ಕಾರ ನೀಡಿದರೆ, ಆಯೋಗ ಚುನಾವಣೆ ನಡೆಸಲು ಸಿದ್ಧ ಎಂದು ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಪಣೀಂದ್ರ ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಉತ್ತರ ನೀಡಿದ ಅಡ್ವೋಕೇಟ್ ಜನರಲ್ ಅವರು, ಮೇ ತಿಂಗಳೊಳಗಾಗಿ ಮೀಸಲಾತಿ ಪಟ್ಟಿಯನ್ನು ಆಯೋಗಕ್ಕೆ ಒದಗಿಸಲಾಗುವುದು.
ಜೂನ್ ಅಥವಾ ಜುಲೈನಲ್ಲಿ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬಹುದಾಗಿದೆ ಎಂದು ನೀಡಿದ ಹೇಳಿಕೆಯನ್ನು ನ್ಯಾಯಮೂರ್ತಿಗಳು ದಾಖಲಿಸಿಕೊಂಡು ಅರ್ಜಿ ಇತ್ಯರ್ಥ ಪಡಿಸಿದರು.
ಚುನಾವಣೆಗೆ ಸರ್ಕಾರ ಸಿದ್ಧ
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದಿದ್ದಾರೆ.
ನ್ಯಾಯಾಲಯಕ್ಕೆ ಸರ್ಕಾರ ಚುನಾವಣೆ ನಡೆಸುವ ವಾಗ್ದಾನ ನೀಡಲಿದೆ ಎಂಬುದನ್ನು ಮೊದಲೇ ಅರಿತ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿನ್ನೆ ಪಕ್ಷದ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಜಿಲ್ಲಾ, ತಾಲ್ಲೂಕು ಪಂಚಾಯತ್ ಅಲ್ಲದೆ, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಉಳಿದ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದರು.
ಮೀಸಲಾತಿ ನಿಗದಿ ಗೊಂದಲ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ, ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಂಡಿದ್ದು ಚುನಾವಣೆ ನಡೆಸಬೇಕಿತ್ತು, ಆದರೆ, ಮೀಸಲಾತಿ ನಿಗದಿ ಗೊಂದಲವನ್ನು ಅಂದಿನ ಸರ್ಕಾರ ಹಾಗೂ ನಂತರದ ಸಿದ್ದರಾಮಯ್ಯ ಸರ್ಕಾರ ಪರಿಹರಿಸಿರಲಿಲ್ಲ.
ಮೀಸಲಾತಿ ಪಟ್ಟಿ ನೀಡದೆ ಚುನಾವಣೆ ನಡೆಸಲು ಆಯೋಗದಿಂದ ಸಾಧ್ಯವಾಗದ ಕಾರಣ ಸರ್ಕಾರದ ವಿರುದ್ಧ ಆಯೋಗ ನ್ಯಾಯಾಂಗನಿಂದನೆ ಅರ್ಜಿ ದಾಖಲಿಸಿತ್ತು.