ಬೆಂಗಳೂರು:ಜನರಿಗೆ ಹೊರೆಯಾಗದಂತೆ ಮುಂಗಡಪತ್ರದಲ್ಲಿ ಒತ್ತು ಕೊಡುವುದಾಗಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಮಾರ್ಚ್ 3ರಿಂದ ವಿಧಾನಮಂಡಲ ಅಧಿವೇಶನ ಕರೆಯಲು ತೀರ್ಮಾನಿಸಿದ್ದು 7ರಂದು 2025-26ನೇ ಸಾಲಿನ ಮುಂಗಡಪತ್ರ ಮಂಡಿಸಲಿದ್ದೇನೆ.
ಬೆಲೆ ಏರಿಕೆಯಿಂದ ಜನ ಕಂಗಾಲು
ಬೆಲೆ ಏರಿಕೆಯಿಂದ ಜನರು ಕಂಗಾಲಾಗಿರುವುದನ್ನು ತಳ್ಳಿಹಾಕುವುದಿಲ್ಲ, ಏರಿಕೆ ಹೊರೆ ಇಳಿಸುವ ಹೊಣೆ ನಮಗಿಂತ ಕೇಂದ್ರ ಸರ್ಕಾರದ ಮೇಲಿದೆ.
ಹಾಗೆಂದು ನಾವು ಸುಮ್ಮನಿರುವುದಿಲ್ಲ, ಇಳಿಕೆಗೆ ನಮ್ಮ ಪ್ರಯತ್ನವಿದೆ, ಇದನ್ನು ಗಮನದಲ್ಲಿಟ್ಟುಕೊಂಡೇ ಮುಂಗಡಪತ್ರ ಮಂಡಿಸುವುದಾಗಿ ಹೇಳಿದರು.
ನನಗೆ ಕಾಲು ನೋವಿದ್ದರೂ ಬಜೆಟ್‌ನ ಪೂರ್ವಭಾವಿ ಸಿದ್ಧತೆ ಸಭೆಗಳನ್ನು ಸುದೀರ್ಘವಾಗಿ ನಡೆಸಿದ್ದೇನೆ.
ಕೃಷಿಗೂ ಹೆಚ್ಚು ಆದ್ಯತೆ
ಇಂದು ರೈತ ಸಂಘಟನೆಗಳ ಜೊತೆ ಸಮಾಲೋಚಿಸಿದ್ದು, ಕೃಷಿಗೆ ಸಂಬಂಧಿಸಿದಂತೆ ಅವರ ಅಭಿಪ್ರಾಯ ಪಡೆದಿದ್ದೇನೆ, ಮುಂಗಡಪತ್ರದಲ್ಲಿ ಕೃಷಿಗೂ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಿದರು.
ಈ ವರ್ಷದ ಮೊದಲ ಅಧಿವೇಶನ ಆಗಿರುವುದರಿಂದ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಂತರ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆಯಲಿದ್ದು, ನಾನು ಮಾರ್ಚ್ 7ರ ಶುಕ್ರವಾರದಂದು ಬಜೆಟ್ ಮಂಡಿಸಲಿದ್ದೇನೆ, ಬಜೆಟ್ ಮೇಲಿನ ಚರ್ಚೆ ನಂತರ ಉತ್ತರ ಕೊಡಲಿದ್ದೇನೆ ಎಂದರು.
ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಮುಖ್ಯಮಂತ್ರಿ, ಹೈಕೋರ್ಟ್ ಈ ಸಂಬಂಧ ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದಾಗಿ ಹೇಳಿದರು.