ಎಚ್ಚರಿಕೆ, ಗಿಚ್ಚರಿಕೇ ನಡೆಯಲ್ಲ, ಬೆದರಿಕೆ ಯಾರು ಕೇಳುತ್ತಾರೆ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸದಾಶಿವನಗರ, ಡಾಲರ‍್ಸ್ ಕಾಲನಿಯಲ್ಲಿ ಎರಡೆರಡು ಮನೆಗಳನ್ನು ಕಟ್ಟಿಕೊಂಡಿಲ್ಲ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ, ಅವರು, ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಡಲಿ.
ಎಐಸಿಸಿ ದುರ್ಬಳಕೆ ವಾಸ್ತವ
ಎಲ್ಲದಕ್ಕೂ ಎಐಸಿಸಿ ಹೇಳಿದೆ ಅಂತ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಾಸ್ತವ, ಇದು ನನ್ನ ಆರೋಪ ಅಲ್ಲ, ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ.
ಐವತ್ತು ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ, ನಾನು ಮಾತನಾಡಿದರೆ, ಸತ್ಪರಿಣಾಮ ಬೀರುವ ಮಾತನ್ನಾಡುತ್ತೇನೆಯೇ ಹೊರತು, ದುಷ್ಪರಿಣಾಮ ಬೀರುವ ಮಾತನ್ನಾಡಲ್ಲ.
ಉಪಮುಖ್ಯಮಂತ್ರಿ ಸ್ಥಾನ ಅಂದರೆ, ತಲೆ ಮೇಲೆ ಏನೋ ಹೆಚ್ಚುವರಿ ಕಿರೀಟ ಇರಲ್ಲ, ಅವರು, ಮುಖ್ಯಮಂತ್ರಿ ಪದದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ.
ಸಾಕಷ್ಟು ವರ್ಷದ ಸ್ನೇಹಿತರು
ಎಚ್ಚರಿಕೆ, ಗಿಚ್ಚರಿಕೇ ಎಲ್ಲಾ ನಡೆಯಲ್ಲ, ಅವರ ಬೆದರಿಕೆಯನ್ನು ಯಾರು ಕೇಳುತ್ತಾರೆ, ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು, ವಿಚಾರ ಭೇದ ಅಷ್ಟೇ, ವೈಯಕ್ತಿಕ ಏನೂ ಇಲ್ಲ, ವಿಧಾನಸೌಧಕ್ಕೆ ನಾನು ಒಂದು ದಾರಿಯಲ್ಲಿ ಬರುತ್ತೇನೆ, ಅವರು ಒಂದು ದಾರಿಯಲ್ಲಿ ಬರುತ್ತಾರೆ.
ನಗರಪಾಲಿಕೆ ಚನಾವಣೆಗೆ ನಿಂತು ೨೫೦ ಮತ ಪಡೆದು ಹಿಂಬಾಗಿಲಿನಿಂದ ರಾಜ್ಯಸಭಾ ಸದಸ್ಯರಾಗಿರುವ ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ನಮಗೆ ಎಚ್ಚರಿಕೆ ನೀಡಲು ಅವನ್ಯಾರು ಎಂದು ಇದೇ ಸಂದರ್ಭದಲ್ಲಿ ಕಿಡಿ ಕಾರಿದರು.
ಶಿಶುಪಾಲ, ಕೃಷ್ಣ ಪುರಾಣ, ಇದೆಲ್ಲಾ ನಾನು ನಂಬಲ್ಲ, ಪುರಾಣ ಎಲ್ಲಾ ಕಟ್ಟುಕಥೆ, ರಾಜ್ಯಸಭೆ, ವಿಧಾನ ಪರಿಷತ್ತಿಗೆ ಕಳಿಸುವಂತಹವರು ಪಕ್ಷಕ್ಕೆ ಮತ ತಂದು ಕೊಡುವಂತಿರಬೇಕು, ಚಂದ್ರಶೇಖರ್ ಅಂತಹವರು ಪಕ್ಷಕ್ಕೆ ಹೊರೆ.
ನಮಗೆ ಬುದ್ಧಿ ಹೇಳುತ್ತಾರೆ
ಅವರ ಹಿನ್ನೆಲೆ ಏನು, ಕಾರ್ಪೊರೇಷನ್ ಚುನಾವಣೆಯಲ್ಲಿ ಅವರಿಗೆ ಎಷ್ಟು ಮತ ಬಂದಿದೆ, ಇಂತಹವರು ನಮಗೆ ಬುದ್ಧಿ ಹೇಳಲು ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ಸಭೆಯಲ್ಲೇ ವರಿಷ್ಠರ ನಿಲುವನ್ನು ಹೇಳಿದ್ದಾರೆ.
ಈ ವಿಚಾರದಲ್ಲಿ ನಾನೇನು ಹಠಕ್ಕೆ ಬಿದ್ದಿಲ್ಲ, ಅಂತಿಮ ನಿರ್ಧಾರ ವರಿಷ್ಠರು ತೆಗೆದುಕೊಳ್ಳುತ್ತಾರೆ, ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ.
ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರು ಇರುತ್ತಾರೆ ಎಂಬ ವರಿಷ್ಠರ ಮಾತನ್ನು ಕೇಳಿದ್ದೆ, ಆದರೆ, ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಅವರೇ ಮುಂದುವರೆದಿದ್ದಾರಲ್ಲಾ ಎಂದರು.