ಬೆಂಗಳೂರು:ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳಿಗೆ ನೀಡಲು ಹಣದ ಕೊರತೆ ಇಲ್ಲ, ಎರಡು, ಮೂರು ತಿಂಗಳ ಬಾಕಿ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳಿಗೆ ನೀಡಲು ಸರ್ಕಾರದ ಬಳಿ ಹಣವಿಲ್ಲ, ಬೊಕ್ಕಸ ಖಾಲಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು.
ಸಂಪನ್ಮೂಲ ಕ್ರೋಡೀಕರಣ
ಸರ್ಕಾರದ ಸಂಪನ್ಮೂಲ ಒಂದೇ ದಿನಕ್ಕೆ ಕ್ರೋಡೀಕರಣ ಆಗುವುದಿಲ್ಲ, ಹಂತ ಹಂತವಾಗಿ ಸಂಗ್ರಹವಾಗುತ್ತದೆ, ಆರ್ಥಿಕ ವರ್ಷಾಂತ್ಯದ ವೇಳೆಗೆ ಎಲ್ಲವೂ ಸರಿಯಾಗಲಿದೆ.
ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ, ಆರ್ಥಿಕವಾಗಿ ನಾವು ಬಲಿಷ್ಠವಾಗಿದ್ದೇವೆ, ಅನ್ನಭಾಗ್ಯ ಯೋಜನೆಯಡಿ ಜನರಿಗೆ ತಲುಪಬೇಕಾದ ಅಕ್ಕಿ ತಲುಪುತ್ತಿದೆ.
ಈ ವಿಚಾರದಲ್ಲಿ ಜನಸಾಮಾನ್ಯರಿಗೆ ಅಸಮಾಧಾನ ಇಲ್ಲ, ಜನರು ಸಂತೋಷವಾಗಿದ್ದಾರೆ, ನಮ್ಮ ಮೇಲೆ ನಂಬಿಕೆ ಇದೆ, ವಿರೋಧ ಪಕ್ಷಗಳು ಮಾತ್ರ ಆರೋಪ ಮಾಡುತ್ತಿವೆ, ಮಾಧ್ಯಮಗಳು ಅದನ್ನು ಬಿತ್ತರಿಸುತ್ತಿವೆ ಎಂದರು.
ನೀರಾವರಿ ಯೋಜನೆಗಳ ಚರ್ಚೆ
ರಾಜಸ್ಥಾನದ ಉದಯಪುರದಲ್ಲಿ ಆಯೋಜಿಸಿರುವ ಅಖಿಲ ಭಾರತ ನೀರಾವರಿ ಸಚಿವರುಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು, ಮಹದಾಯಿ, ನವಲಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲಾಗುವುದು ಎಂದರು.
ನೀರಾವರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಸ್ತಾಪಿಸಲಾಗುವುದು, ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿನ ಅನ್ಯಾಯಗಳ ಬಗ್ಗೆ ಚರ್ಚಿಸಲಾಗುವುದು.
ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರದ ಅನುಮತಿಗೆ ಕಳುಹಿಸಲಾಗಿದೆ.
ಕೇಂದ್ರಕ್ಕೆ ಪ್ರಸ್ತಾವನೆ
ತುಂಗ-ಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್ ದುರಸ್ತಿ ನಂತರ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ದೃಷ್ಟಿಯಿಂದ ದುರಸ್ತಿ ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ತೆಲಂಗಾಣ ಹಾಗೂ ಆಂಧ್ರಪ್ರದೇಶ ಸಚಿವರ ಜೊತೆ ಚರ್ಚೆಗೆ ಪ್ರತ್ಯೇಕ ಸಭೆ ನಡೆಸುವ ಸಂಬಂಧ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.