ಬೆಂಗಳೂರು:ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹಣಕ್ಕೆ ಬದಲು ಫೆಬ್ರವರಿ ತಿಂಗಳಿನಿಂದಲೇ ಐದು ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನೀಡುತ್ತಿದ್ದ ಐದು ಕೆ.ಜಿ. ಅಕ್ಕಿ ಜೊತೆಗೆ ಅನ್ನಭಾಗ್ಯ ಯೋಜಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ ಐದು ಕೆ.ಜಿ. ಅಕ್ಕಿ ನೀಡಲಾಗುವುದು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾಗಿದ್ದ ಅಕ್ಕಿ ಪೂರೈಸದ ಕಾರಣ ಈ ಯೋಜನೆಯಡಿ ಅಕ್ಕಿ ಬದಲು ಪ್ರತಿ ಫಲಾನುಭವಿಗೆ ಮಾಸಿಕ 170 ರೂ.ಗಳನ್ನು ನೀಡಲಾಗುತ್ತಿತ್ತು.
ಜನವರಿವರೆಗೂ ಹಣ
ಕಳೆದ ಜನವರಿವರೆಗೂ ಹಣವನ್ನು ಫಲಾನುಭವಿ ಖಾತೆಗೆ ವರ್ಗಾವಣೆ ಮಾಡಲಾಗುವುದು, ಈ ತಿಂಗಳಿಂದ ನಗದು ಬದಲು ಅಕ್ಕಿ ನೀಡಲು ತೀರ್ಮಾನಿಸಲಾಗಿದೆ.
ಮಾರ್ಚ್ 10ರೊಳಗಾಗಿ ಫಲಾನುಭವಿಗಳಿಗೆ ಎರಡು ತಿಂಗಳ ಅಕ್ಕಿಯೂ ದೊರೆಯಲಿದೆ, ಎಂದಿನಂತೆ ಪಡಿತರ ಅಂಗಡಿಗಳಲ್ಲಿ ಅಕ್ಕಿ ಪಡೆದುಕೊಳ್ಳಬಹುದಾಗಿದೆ.
ಸರ್ಕಾರದ ಈ ನಿರ್ಧಾರದಿಂದ ರಾಜ್ಯ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಉಳಿತಾಯ ಆಗಲಿದೆ, ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಗೆ 22.50 ರೂ.ನಂತೆ ಅಕ್ಕಿ ಕೊಡಲು ಮುಂದೆ ಬಂದಿದೆ.
ಫಲಾನುಭವಿಗಳಿಗೆ ಇದುವರೆಗೆ ಅಕ್ಕಿ ಬದಲು ಪ್ರತಿ ಕೆ.ಜಿ.ಗೆ 34 ರೂ.ನಂತೆ ಮಾಸಿಕ 170 ರೂ. ನೀಡುತ್ತಿದ್ದೆವು.
ಕಡಿಮೆ ದರಕ್ಕೆ ಕೇಂದ್ರದ ಅಕ್ಕಿ
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯಕ್ಕೆ ಅಗತ್ಯವಿರುವ ಅಕ್ಕಿಯನ್ನು ಕಡಿಮೆ ದರಕ್ಕೆ ನೀಡಲು ತೀರ್ಮಾನಿಸಿರುವುದರಿಂದ, ನಮಗೆ ಪ್ರತಿ ಕೆ.ಜಿ.ಗೆ 11.50 ರೂ. ಉಳಿತಾಯವಾಗಲಿದೆ ಎಂದರು.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದಾಗ ನಮಗೆ ಅಗತ್ಯವಿರುವ ಅಕ್ಕಿಯನ್ನು ನೀಡಲು ಕೇಂದ್ರ ನಿರಾಕರಿಸಿದ್ದರಿಂದ ಪ್ರತಿ ಫಲಾನುಭವಿಗೆ ಮಾಸಿಕ 170 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗವಣೆ ಮಾಡುತ್ತಿದ್ದೆವು.
ಕಳೆದ ನವೆಂಬರ್‌ವರೆಗೆ ಹಣ ಸಂದಾಯವಾಗಿದೆ, ಡಿಸೆಂಬರ್ ಮತ್ತು ಜನವರಿ ತಿಂಗಳ ಹಣ ವರ್ಗಾವಣೆಗೆ ಸಿದ್ಧತೆ ನಡೆದಿದೆ.
ಒಟ್ಟು 10 ಕೆ.ಜಿ. ಉಚಿತ ಅಕ್ಕಿ
ಇನ್ನು ಮುಂದೆ ಹಣದ ಬದಲು ಪ್ರತಿ ಫಲಾನುಭವಿ ಮಾಸಿಕ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಪಡೆದುಕೊಳ್ಳಲಿದ್ದು, ಇದರಲ್ಲಿ ಕೇಂದ್ರದ ಐದು ಕೆ.ಜಿ. ಮತ್ತು ರಾಜ್ಯ ಸರ್ಕಾರದ ಐದು ಕೆ.ಜಿ. ಸೇರಿದೆ.
ಕಳೆದ ಅಕ್ಟೋಬರ್‌ನಲ್ಲಿ 1,16,39,179 ಪಡಿತರ ಚೀಟಿಗಳ 4,12,16,838 ಫಲಾನುಭವಿಗಳಿಗೆ 676.79 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
ಜುಲೈ 2023ರಿಂದ ಅಕ್ಟೋಬರ್ 2024ರವರೆಗೆ 10,452 ಕೋಟಿ ರೂ. ವರ್ಗಾವಣೆ ಮಾಡಲಾಗಿದ್ದು, ನವೆಂಬರ್, ಡಿಸೆಂಬರ್ ಮತ್ತು ಜನವರಿ ಹಣ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಆಹಾರ ಭದ್ರತಾ ಕಾಯ್ದೆ
ಭಾರತ ಸರ್ಕಾರ 2013ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಮೊಟ್ಟ ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಮತ್ತು ಎರಡನೇ ಆಡಳಿತಾವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಪ್ರಾಮುಖ್ಯತೆ ನೀಡುವ ಮೂಲಕ ಕರ್ನಾಟಕವನ್ನು ಹಸಿವುಮುಕ್ತ ರಾಜ್ಯವನ್ನಾಗಿಸಿರುವುದು ಹೆಮ್ಮೆಯ ವಿಷಯ ಎಂದರು.
ರಾಗಿ, ಜೋಳ, ಭತ್ತ ಖರೀದಿ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಮತ್ತು ಭತ್ತ ಖರೀದಿಗೆ 366 ಕೇಂದ್ರ ತೆರೆಯಲಾಗಿದೆ, ಕಳೆದ ಡಿಸೆಂಬರ್ 1 ರಿಂದಲೇ ನೋಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ವರ್ಷದ ಮಾರ್ಚ್ ಅಂತ್ಯದವರೆಗೆ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಕೇಂದ್ರ ಸರ್ಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆಯನ್ನು 4,290 ರೂ.ಗೆ ನಿಗದಿಪಡಿಸಿದೆ, ಖರೀದಿ ಗುರಿ4.40 ಲಕ್ಷ ಮೆಟ್ರಿಕ್ ಟನ್‌ಗಳಾಗಿದೆ, 3.6 ಲಕ್ಷ ಮೆಟ್ರಿಕ್ ಟನ್ ರಾಗಿ ನೀಡಲು 2,54,528 ರೈತರು ನೋಂದಾಯಿಸಿಕೊಂಡಿದ್ದು, ಪ್ರತಿ 10 ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಸಲು ಕ್ರಮ ವಹಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ
ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 2,300 ರೂ., “ಎ” ಗ್ರೇಡ್ ಭತ್ತಕ್ಕೆ 2,320 ರೂ. ನಿಗದಿಯಾಗಿದ್ದು, ಖರೀದಿ ಗುರಿ 7.5 ಲಕ್ಷ ಮೆಟ್ರಿಕ್ ಟನ್‌ಗಳಾಗಿದೆ, ಭತ್ತ ನೀಡಲು 3,388 ರೈತರು ನೋಂದಾಯಿಸಿಕೊಂಡಿದ್ದು, ಪ್ರತಿ ರೈತರಿಂದ 50 ಕ್ವಿಂಟಾಲ್ ಖರೀದಿಗೆ ಕ್ರಮ ವಹಿಸಲಾಗಿದೆ.
ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ 3,371 ರೂ., ಮಾಲ್ಡಂಡಿ ಜೋಳಕ್ಕೆ 3,421 ರೂ., ಖರೀದಿ ಗುರಿ ಒಂದು ಲಕ್ಷ ಮೆಟ್ರಿಕ್ ಟನ್ ನಿಗದಿಯಾಗಿದ್ದು, 17,527 ರೈತರು ನೋಂದಾಯಿಸಿಕೊಂಡಿದ್ದು, ಪ್ರತಿ ರೈತರಿಂದ 150 ಕ್ವಿಂಟಾಲ್‌ನಂತೆ ಖರೀದಿಸಲಾಗುವುದು.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಲೋಪ ಕಂಡು ಬಂದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಆಹಾರ ಇಲಾಖೆ ಕಛೇರಿಗಳ ಸಂಕೀರ್ಣ ಆಹಾರಸೌಧವನ್ನು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ, ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚಿ ರದ್ದುಗೊಳಿಸಲಾಗುತ್ತಿದೆ ಎಂದರು.