ವೇಮಗಲ್(ಕೋಲಾರ ಜಿಲ್ಲೆ):ಇನ್ವೆಸ್ಟ್ ಕರ್ನಾಟಕ ಯೋಜನೆಯಡಿ ಜರ್ಮನಿಯ ಕ್ರೋನ್ಸ್ ಕಂಪನಿ ಕೋಲಾರ ಜಿಲ್ಲೆ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಿರುವ 315 ಕೋಟಿ ರೂ. ಹೂಡಿಕೆಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಘಟಕ ಸ್ಥಾಪನೆಯಿಂದ 550 ಮಂದಿಗೆ ಉದ್ಯೋಗ ದೊರೆಯಲಿದ್ದು, ಸ್ಥಳೀಯರನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು ಎಂದರು.
ಕೈಗಾರಿಕಾ ಅಗತ್ಯಗಳಿಗೆ ಬೇಕಾಗುವ ಬಾಟ್ಲಿಂಗ್ ಮತ್ತು ಶುದ್ಧೀಕರಣ ಸಾಧನಗಳ ತಯಾರಿಕೆಗೆ ದೇಶದಲ್ಲಿ ಅಪಾರ ಬೇಡಿಕೆ ಇರುವುದನ್ನು ಮನಗಂಡ ಕ್ರೋನ್ಸ್ ಕಂಪನಿ, ರಾಜ್ಯದಲ್ಲಿ ಸ್ಥಾವರ ಸ್ಥಾಪನೆಗೆ ಮುಂದಾಗಿದೆ.
ಸ್ಥಳೀಯರಿಗೆ ಉದ್ಯೋಗ
ಬಂಡವಾಳ ಹೂಡಿಕೆ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ, ವೇಮಗಲ್ ಕೈಗಾರಿಕಾ ಪ್ರದೇಶ ಬೆಂಗಳೂರಿಗೆ ಹತ್ತಿರದಲ್ಲಿ ಇರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ 10.27 ಲಕ್ಷ ಕೋಟಿ ರೂ. ಹೂಡಿಕೆ ಒಡಂಬಡಿಕೆಗಳ ಭಾಗವಾಗಿ ವೇಮಗಲ್‌ನಲ್ಲಿ 315 ಕೋಟಿ ರೂ. ಹೂಡಿಕೆ ಸಾಕಾರಗೊಳ್ಳುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ಸಚಿವರ ನಿಯೋಗ ಜರ್ಮನಿ ರೋಡ್ ಷೋನಲ್ಲಿ ಪಾಲ್ಗೊಂಡು ನ್ಯೂಟ್ರಾಬ್ಲಿಂಗ್‌ನಲ್ಲಿನ ಕ್ರೋನ್ಸ್ ಕಂಪನಿ ಪ್ರಧಾನಕಚೇರಿಗೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು.
ಬೆಂಬಲಕ್ಕೆ ಸರ್ಕಾರ ಬದ್ಧ
ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ನಾವೀನ್ಯತೆಗಳಿಗೆ ಹೆಸರು ಮಾಡಿರುವ ಕಂಪನಿ ಭಾರತದಲ್ಲಿ ನೂತನ ಉತ್ಪಾದನಾ ಸ್ಥಾವರ ಆರಂಭಿಸುತ್ತಿರುವುದು ಸ್ವಾಗತಾರ್ಹ, ಜರ್ಮನಿಯಲ್ಲಿ ಏನಿದೆಯೋ ಅವೆಲ್ಲವೂ ನಮ್ಮಲ್ಲೂ ಬರಬೇಕು, ಇದಕ್ಕಾಗಿ ಎಲ್ಲ ಬೆಂಬಲ ಕೊಡಲು ಸರ್ಕಾರ ಬದ್ಧವಾಗಿದೆ.
ಕಂಪನಿ ಹಂತ ಹಂತವಾಗಿ 315 ಕೋಟಿ ರೂ. ಹೂಡಿಕೆ ಮಾಡಲಿದ್ದು, ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಘಟಕದಲ್ಲಿ ಉತ್ಪಾದಿಸಲಾಗುತ್ತದೆ.
ಸ್ಥಳೀಯರಿಗೆ ಹಾಗೂ ಸ್ಥಾವರಕ್ಕಾಗಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡುವಲ್ಲಿ ಕ್ರೋನ್ಸ್ ಕಂಪನಿ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳಿಗೆ ಸಚಿವರ ಸೂಚನೆ
ವೇಮಗಲ್ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು, ಉತ್ಪಾದನಾ ವಲಯದಲ್ಲಿ ಕರ್ನಾಟಕದ ಅಭಿವೃದ್ಧಿ ಕುರಿತು ಸದ್ಯದಲ್ಲೇ ಪರಿಣಿತರ ಜೊತೆ ಚರ್ಚಿಲಾಗುವುದು, ಸಿಎಸ್‌ಆರ್ ಹಣವನ್ನೂ ಸ್ಥಳೀಯರ ಅಭಿವೃದ್ಧಿಗೆ ಬಳಸುವಂತೆ ಕಂಪೆನಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನೂತನ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ, ಉದ್ದಿಮೆಗಳಿಗೆ ಬಂಡವಾಳದ ಮೇಲೆ ಸಹಾಯಧನ ಅಥವಾ ಉತ್ಪಾದನೆಗೆ ತಕ್ಕ ಪ್ರೋತ್ಸಾಹ ಭತ್ಯೆ, ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಕೊಡಲಾಗಿದೆ.
ತ್ವರಿತಗತಿಯಲ್ಲಿ ಅಗತ್ಯ ಅನುಮೋದನೆ ನೀಡಲು ಪರಿಷ್ಕೃತ ಏಕಗವಾಕ್ಷಿ ವ್ಯವಸ್ಥೆಯನ್ನೂ ತರಲಾಗಿದೆ, ಕ್ರೋನ್ಸ್ ಕಂಪನಿ ಮುಂಬರುವ ದಿನಗಳಲ್ಲಿ ಅಪಾರ ಹೂಡಿಕೆ ಮಾಡುವ ನಿರೀಕ್ಷೆ ಇದೆ.
ಭಾರತದಲ್ಲಿ 23 ವರ್ಷಗಳ ನೆಲೆ
ಕ್ರೋನ್ಸ್ ಕಂಪನಿ ಆಹಾರ ಮತ್ತು ಪಾನೀಯ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ಭಾರತದಲ್ಲಿ ನೆಲೆ ಹೊಂದಿದೆ, ಕಂಪನಿಯ ಡಿಜಿಟಲ್ ವಿಭಾಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇದೆ, ಕಂಪನಿಯ ಸಾಫ್ಟ್ವೇರ್ ಅಭಿವೃದ್ಧಿ, ಐಟಿ ಭದ್ರತೆ ಮತ್ತು ಡಿಜಿಟಲ್ ಪರಿಹಾರಗಳಿಗೆ ಬಲ ತುಂಬಿದೆ.
ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಉತ್ಪಾದನಾ ಘಟಕ ಭಾರತದಲ್ಲಿ ಕಂಪನಿಯ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಿ, ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ ಎಂದರು.