ಬೆಂಗಳೂರು:ಮುಡಾ ಹಗರಣದಲ್ಲಿ ನ್ಯಾಯಾಲಯಕ್ಕೆ ಲೋಕಾಯುಕ್ತ ’ಬಿ’ ರಿಪೋರ್ಟ್ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜು ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಸಿದ್ದರಾಮಯ್ಯ ಕುಟುಂಬ 14 ಬಿಡಿ ನಿವೇಶನಗಳನ್ನು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್, 27 ಸಂಪುಟಗಳನ್ನು ಒಳಗೊಂಡ 11,000 ಪುಟಗಳ ತನಿಖಾ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದರು.
ಎಂಟು ಸಾವಿರ ಪುಟಗಳ ವರದಿ, 3000 ಡಾಕ್ಯೂಮೆಂಟರಿಗಳನ್ನು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಗೆ ಸಲ್ಲಿಸಿದರು.
ಸಾಕ್ಷ್ಯಾಧಾರಾಗಳ ಕೊರತೆ
ಸಾಕ್ಷ್ಯಾಧಾರಾಗಳ ಕೊರತೆ ಹಿನ್ನೆಲೆಯಲ್ಲಿ ಪ್ರಮುಖ ನಾಲ್ವರು ಆರೋಪಿಗಳ ಪಾತ್ರವಿಲ್ಲ ಎಂಬುದು ಕಂಡುಬಂದಿದೆ, ಜೊತೆಗೆ ಇವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರ ಹೇಳಿಕೆಗಳನ್ನು ದಾಖಲಿಸಿದ್ದು, ತನಿಖಾ ಸಂದರ್ಭದಲ್ಲಿ ಪ್ರಮುಖ ಆರೋಪಿಗಳ ಪಾತ್ರ ಇಲ್ಲ ಹಾಗೂ ಸಾಕ್ಷಿಗಳೂ ಇಲ್ಲ, ಹಾಗಾಗಿ ಅವರನ್ನು ಬಿಟ್ಟು ತನಿಖೆ ಮುಂದುವರೆಸುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದಿರುವ ಲೋಕಾಯುಕ್ತ, 14 ನಿವೇಶನಗಳ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಕುಟುಂಬ ಮುಡಾ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
14 ನಿವೇಶನಗಳ ವಾಪಸ್
ಇವರ ಕುಟುಂಬಕ್ಕೆ ಪರ್ಯಾಯವಾಗಿ ಮುಡಾದಿಂದ ಸಿಗಬೇಕಾದದ್ದೂ ದೊರೆತಿಲ್ಲ, ಈಗಾಗಲೇ ಪಾರ್ವತಿ ಅವರು, ತಾವು ಪಡೆದಿದ್ದ 14 ನಿವೇಶನಗಳನ್ನೂ ಹಿಂತಿರುಗಿಸಿದ್ದಾರೆಂದು ಲೋಕಾಯುಕ್ತ ತನ್ನ ವರದಿಯಲ್ಲಿ ತಿಳಿಸಿದೆ.
ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಿ ಮಧ್ಯೆ ಜಮೀನು ವರ್ಗಾವಣೆ ಕಾನೂನಾತ್ಮಕವಾಗಿ ನಡೆದಿದೆ, ಆದರೆ, ದೇವರಾಜುಗೆ ಸಂಬಂಧಿಸಿದಂತಹ ಡಿ-ನೋಟಿಫೈ ಪ್ರಕ್ರಿಯೆಯಲ್ಲಿ ಮುಡಾ ಲೋಪ ಎಸಗಿದೆ.
ದೇವರಾಜು ಸರ್ಕಾರಿ ಸೇವೆಯಲ್ಲಿ ಇರುವುದನ್ನು ಮರೆಮಾಚಿರುವುದಲ್ಲದೆ, ಡಿ-ನೋಟಿಫೈ ವೇಳೆ ತಮಗಿರುವ ಆಸ್ತಿ-ಪಾಸ್ತಿಗಳ ಬಗ್ಗೆಯೂ ವಿವರ ನೀಡಿಲ್ಲ, ಆದ್ದರಿಂದ ಪ್ರಕರಣದಲ್ಲಿ ಬೇರೆ ಯಾರ ಪಾತ್ರವೂ ಇಲ್ಲ ಎಂಬುದು ನಮ್ಮ ತನಿಖಾ ವರದಿಯಿಂದ ತಿಳಿದುಬಂದಿದೆ.
ಅಧಿಕಾರಿಗಳ ಎಡವಟ್ಟು ಆರೋಪ
ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆ ಬಹಳಷ್ಟು ಎಡವಟ್ಟು ಮಾಡಿವೆ, ಕೆಸರೆ ಗ್ರಾಮದ ಸ್ಥಳವನ್ನು ಬಡಾವಣೆ ಮಾಡಲು ವಶ ಪಡಿಸಿಕೊಳ್ಳಲಾಗಿತ್ತು, ನಂತರ ರಸ್ತೆ, ನಿವೇಶನಗಳನ್ನು ಮಾಡಲು ಹಾಗೂ ಇತರ ಮೂಲಸೌಕರ್ಯ ಕಲ್ಪಿಸಲು ಎಲ್ ಅಂಡ್ ಟಿ ಕಂಪನಿಗೆ ನೀಡಲಾಗಿತ್ತು.
ಈ ವೇಳೆ ವಿವಾದಿತ 3.18 ಎಕರೆ ಪ್ರದೇಶ ಡಿ-ನೋಟಿಫೈ ಆಗಿದೆ ಎಂಬುದಾಗಿ ನಕಾಶೆಯಲ್ಲಿ ತೋರಿಸಲಾಗಿತ್ತು, ಆದರೆ, ಎಲ್ ಅಂಡ್ ಟಿ ಅವರು ಡಿ-ನೋಟಿಫೈ ಆಗಿರುವ ಜಮೀನನ್ನೂ ಅಭಿವೃದ್ಧಿ ಮಾಡಿದ್ದಾರೆ.
ಇಂತಹ ಎಡವಟ್ಟನ್ನು ಮುಡಾ ಅಧಿಕಾರಿಗಳು ಗಮನಿಸದೆ ಭಾರೀ ಲೋಪ ಮಾಡಿದ್ದಾರೆ, ಅಷ್ಟೇ ಅಲ್ಲ, ಅಭಿವೃದ್ಧಿ ಆದ ನಂತರ ನಿವೇಶನಗಳ ಹಂಚಿಕೆಯನ್ನೂ ಮಾಡಿದ್ದಾರೆ.
ಎಲ್ ಅಂಡ್ ಟಿ, ಮುಡಾ ತಪ್ಪು
ಹೀಗಾಗಿ ಎಲ್ ಅಂಡ್ ಟಿ ಮತ್ತು ಮುಡಾ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.
ಕೃಷಿ ಭೂಮಿ ಪರಿವರ್ತನೆ ಸಮಯದಲ್ಲೂ ಕಂದಾಯ ಅಧಿಕಾರಿಗಳು ಲೋಪ ಎಸಗಿದ್ದಾರೆ, ಜಮೀನು ಇರುವ ಸ್ಥಳಕ್ಕೆ ಹೋಗದೆ ಕಚೇರಿಯಲ್ಲೇ ಕುಳಿತು ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸಿ ನಿರ್ಲಕ್ಷ್ಯ ತೋರಿದ್ದಾರೆ.
ಹೈಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ಮುಡಾ, ಮುಖ್ಯಮಂತ್ರಿ ಕುಟುಂಬಕ್ಕೆ 14 ನಿವೇಶನಗಳನ್ನು ಹಂಚಿಕೆ ಮಾಡಿರುವುದಷ್ಟೇ ಅಲ್ಲ, ಉಳಿದ 130 ಪ್ರಕರಣಗಳಲ್ಲೂ ಪರ್ಯಾಯ ನಿವೇಶನಗಳನ್ನು ಹಂಚಿದ್ದಾರೆ.
ಹೀಗಾಗಿ ಪರ್ಯಾಯ ಪರಿಹಾರ ಕೊಟ್ಟಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ, ವರದಿಯಲ್ಲಿನ ಅಧಿಕಾರಿಗಳ ತಪ್ಪಿನ ತನಿಖೆ ಬಗ್ಗೆ ಕೋರ್ಟ್ ತೀರ್ಮಾನ ಕೈಗೊಳ್ಳಬೇಕು ಎಂದು ಲೋಕಾಯುಕ್ತ ಮನವಿ ಮಾಡಿದೆ.