ಬೆಂಗಳೂರು:ಬೇಸಿಗೆ ದಿನಗಳಲ್ಲಿ ಅಕಾಲಿಕ ಮಳೆ ಬರದಿದ್ದರೆ ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡು ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಲಿದೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೂ, ಕಡು ಬೇಸಿಗೆಯಲ್ಲಿನ ಬೇಡಿಕೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ.
ಇದನ್ನು ಸರಿದೂಗಿಸಲು ಅಧಿಕಾರಿಗಳು ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಿಂದ ಸಾಲದ ರೂಪದಲ್ಲಿ ವಿದ್ಯುತ್ ಪಡೆಯಲು ಹಾಗೂ ನಮ್ಮಲ್ಲಿನ ಸ್ಥಗಿತಗೊಂಡಿರುವ ಎಲ್ಲಾ ತೆರನಾದ ವಿದ್ಯುತ್ ಉತ್ಪಾದನಾ ಮೂಲಗಳನ್ನು ಚಾಲನೆಗೊಳಿಸುವಂತೆ ಆದೇಶಿಸಲಾಗಿದೆ.
ಶೇಕಡ 70ರಷ್ಟು ನೀರು ಸಂಗ್ರಹ
ರಾಜ್ಯದ ಜಲಾಶಯಗಳಲ್ಲಿ ಶೇಕಡ 70ರಷ್ಟು ನೀರು ಸಂಗ್ರಹವಿದೆ, ಈ ನೀರನ್ನು ಕೃಷಿಯ ಎರಡನೇ ಬೆಳೆಗೆ ಬಳಕೆ ಮಾಡುವಂತೆ ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಸರ್ಕಾರ ಆದೇಶ ಮಾಡಿದೆ.
ಈ ಆದೇಶವೇ ವಿದ್ಯುತ್ ಭಾರೀ ಬೇಡಿಕೆಗೆ ಕಾರಣವಾಗಿದೆ, ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಕಟಾವು ಪೂರ್ಣಗೊಂಡಿದ್ದು ಹೆಚ್ಚಿನ ಬೇಡಿಕೆ ಇಲ್ಲ, ಹಳೇ ಮೈಸೂರು ಭಾಗದಲ್ಲಿ ಜಲಾಶಯಗಳಿಂದ ನೀರು ಹರಿಸಲಾಗುತ್ತಿದೆ.
ಅದರಲ್ಲೂ ಮಂಡ್ಯ, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಆಗುತ್ತಿದೆ.
ಶೇಕಡ 30 ಹೆಚ್ಚು ವಿದ್ಯುತ್ ಬೇಡಿಕೆ
ನಿಗದಿತ ಸರಬರಾಜಿಗಿಂತ ಶೇಕಡ 30ರಷ್ಟು ಹೆಚ್ಚು ವಿದ್ಯುತ್ ಬೇಡಿಕೆ ಈ ಪ್ರದೇಶದಲ್ಲಿದೆ, ಇದನ್ನು ನಿಭಾಯಿಸಲು ಬೇಡಿಕೆಗೆ ಅಗತ್ಯವಿರುವಷ್ಟು ಪೂರೈಕೆ ಮಾಡಲು ಸೂಚಿಸಲಾಗಿದೆ.
ಹಿಂದಿನ ಮೂರು ವರ್ಷಗಳಲ್ಲಿ ಬರದಿಂದ ತತ್ತರಿಸಿರುವ ರೈತರಿಗೆ ಈ ಬಾರಿ ನೀರಿರುವುದರಿಂದ ಎರಡನೇ ಬೆಳೆಗೆ ಅಡ್ಡಿ ಮಾಡದೆ ನೀರು ಪೂರೈಸಿ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಲಹೆ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಎಲ್ಲಿಯೂ ವಿದ್ಯುತ್ ತೊಂದರೆ ಆಗದಂತೆ ಸಂಜೆ 6 ಗಂಟೆಯಿಂದ ಮುಂಜಾನೆ 6ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಸೂಚಿಸಲಾಗಿದೆ.
ಕೃಷಿಗೆ ಹಗಲಿನ ವೇಳೆ ವಿದ್ಯುತ್
ಅರಣ್ಯ ಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ಆರರಿಂದ ಏಳು ತಾಸು ವಿದ್ಯುತ್ ಅನ್ನು ಹಗಲಿನ ವೇಳೆ ನೀಡಿ ಎಂದು ಇಲಾಖೆ ಆದೇಶ ಮಾಡಿದೆ.
ರೈತರು ರಾತ್ರಿ ವೇಳೆ ನೀರು ಹರಿಸಲು ಹೋದಾಗ, ಕೆಲವರು ಕಾಡು ಪ್ರಾಣಿಗಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಮಾಡಿದೆ.
ಬೇಸಿಗೆ ಆರಂಭದಲ್ಲೇ 17,000 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ, ಆದರೆ, ನಮ್ಮಲ್ಲಿನ ಉತ್ಪಾದನೆ ಮತ್ತು ಹೊರರಾಜ್ಯಗಳಿಂದ ಖರೀದಿ ಮಾಡುತ್ತಿರುವುದು 16,600 ಮೆಗಾ ವ್ಯಾಟ್ ಮಾತ್ರ.
ಬೇಡಿಕೆ 19,500 ಮೆಗಾ ವ್ಯಾಟ್‌ಗೆ
ಮುಂದಿನ ಮೂರು ತಿಂಗಳಲ್ಲಿ ಈ ಬೇಡಿಕೆ 19,000 ದಿಂದ 19,500 ಮೆಗಾ ವ್ಯಾಟ್‌ಗೆ ಮುಟ್ಟಬಹುದೆಂದು ಅಂದಾಜು ಮಾಡಲಾಗಿದೆ.
ಈ ಕಾರಣಕ್ಕಾಗಿಯೇ ದುರಸ್ತಿಗೆ ಒಳಗಾಗಿರುವ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಿಗೆ ತಿಂಗಳಾಂತ್ಯದೊಳಗೆ ಚಾಲನೆ ನೀಡುವಂತೆ ಸೂಚಿಸಿದೆ.
ಜೊತೆ ಜೊತೆಯಲ್ಲೇ ತೀವ್ರ ಬೇಡಿಕೆ ಮತ್ತು ಸಂಕಷ್ಟ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನಾ ಜಲಾಶಯಗಳಿಂದ ಹೆಚ್ಚು ಉತ್ಪಾದನೆ ಮಾಡುವಂತೆಯೂ ಆದೇಶಿಸಿದೆ.
ಕಳೆದ ವರ್ಷ ಉತ್ತಮ ಮಳೆ
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ಶೇಕಡ 70ರಷ್ಟು ನೀರಿನ ಸಂಗ್ರಹವಿದೆ.
ಜಲಾಶಯಗಳಲ್ಲಿ ನೀರಿದ್ದರೂ ಸಂಪೂರ್ಣ ವಿದ್ಯುತ್ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ, ಬರುವ ದಿನಗಳಲ್ಲಿ ಕೊರತೆಯಾಗುವ 3,000 ಮೆಗಾವ್ಯಾಟ್ ಪೈಕಿ ಉತ್ತರ ಪ್ರದೇಶ ಮತ್ತು ಪಂಜಾಬ್‌ನಿಂದ ಸಾಲದ ರೂಪದಲ್ಲಿ ವಿದ್ಯುತ್ ಪಡೆಯಲು ಇಲಾಖೆ ಒಪ್ಪಂದ ಮಾಡಿಕೊಂಡಿದೆ.
ತದನಂತರ ಉಂಟಾಗುವ ಕೊರತೆಯನ್ನು ಖಾಸಗಿ ವಿದ್ಯುತ್ ಸಂಸ್ಥೆಗಳಿಂದ ಖರೀದಿ ಮಾಡಬೇಕಾಗುತ್ತದೆ, ಅದನ್ನು ಸರಿದೂಗಿಸಲು ಇಲಾಖೆಯಲ್ಲಿ ಹಣದ ಕೊರತೆಯಿದೆ.
ಸರ್ಕಾರ ಮಧ್ಯೆ ಪ್ರವೇಶ ಮಾಡಿದ ನಂತರವೂ ಎದುರಾಗುವ ವಿದ್ಯುತ್ ಕೊರತೆ ನಿಭಾಯಿಸಲು, ಕಡಿತ ಮಾಡದೆ ಲೋಡ್‌ಶೆಡ್ಡಿಂಗ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.