ಬೆಂಗಳೂರು:ಬರಿದಾಗಿರುವ ಖಜಾನೆ ತುಂಬಿಕೊಳ್ಳಲು ದಾಖಲೆಗಳಿಲ್ಲದೆ ಕಂದಾಯ ಭೂಮಿಯಲ್ಲಿ ನಿರ್ಮಾಣಗೊಂಡಿರುವ ನಿವೇಶನ ಮತ್ತು ಮನೆಗಳನ್ನು ಸಕ್ರಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಜನರ ಪ್ರೀತಿಯಿಂದ ಅಕ್ರಮ-ಸಕ್ರಮ ಮಾಡುತ್ತಿಲ್ಲ, ಸರ್ಕಾರದ ಆರ್ಥಿಕ ಸಂಕಷ್ಟ ಬಗೆಹರಿಸಿಕೊಳ್ಳಲು ಈ ಕೆಲಸಕ್ಕೆ ಕೈಹಾಕಿದ್ದಾರೆ.
’ಬಿ’ ಖಾತಾಗೆ ತುರ್ತು ನಿರ್ಧಾರ
ಕಾನೂನಿನ ತೊಡಕುಗಳಿವೆ, ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳು ಇರ್ತ್ಯಥವಾಗಿಲ್ಲ, ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ, ಮೂರು ತಿಂಗಳೊಳಗೆ ಅಕ್ರಮ ಮನೆ, ನಿವೇಶನಗಳಿಗೆ ’ಬಿ’ ಖಾತಾ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಗಳಿಗೆ ಆದೇಶ ನೀಡಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಒಮ್ಮಲೇ ಸಾವಿರಾರು ಕೋಟಿ ರೂ. ಸಂಗ್ರಹವಾಗಲಿದೆ, ಈ ಹಣದ ಬಹುಪಾಲು, ಸರ್ಕಾರ ಪಡೆದಿರುವ ಸಾಲದ ಮೇಲಿನ ಬಡ್ಡಿ ಕಟ್ಟಲು ಬಳಕೆ ಆಗಲಿದೆ.
ಅಧಿಕಾರಕ್ಕೆ ಬರಬೇಕೆಂಬ ಒಂದೇ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಅನುಷ್ಟಾನಕ್ಕೆ ತಂದರಾದರೂ, ಅನುಷ್ಟಾನಗೊಂಡ ಯೋಜನೆಗಳಿಗೆ ಹಣ ನೀಡಿದೆ ಇಲಾಖೆಗಳು ಆರ್ಥಿಕ ಮುಗ್ಗಟ್ಟಿನಿಂದ ನರಳುತ್ತಿವೆ.
60,000 ಕೋಟಿ ರೂ. ಬಾಕಿ
ಕೆಲವು ಸಂಸ್ಥೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ, ಗೃಹ ಜ್ಯೋತಿ ಯೋಜನೆ ಅನುಷ್ಟಾನ ನಂತರ ಇಂಧನ ಇಲಾಖೆಗೆ 60,000 ಕೋಟಿ ರೂ. ಬಾಕಿ ಇದೆ.
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಫಲಾನುಭವಿಗಳಿಗೂ ತಿಂಗಳುಗಟ್ಟಲೆ ಹಣ ಬಾಕಿ ಉಳಿಸಿಕೊಂಡಿದ್ದಾರೆ.
ಸಂಪನ್ಮೂಲ ಕ್ರೋಡೀಕರಣ ಮಾಡದೆ, ಇರುವ ಹಣವನ್ನೆಲ್ಲಾ ಗ್ಯಾರಂಟಿಗೆ ನೀಡಿ ರಾಜ್ಯದ ಅಭಿವೃದ್ಧಿಗೆ ಹಣಕಾಸು ಇಲ್ಲದೆ ಮಾರಕವಾಗುತ್ತಿದೆ.
ರಾಜ್ಯದ ಪಾಲು ನೀಡಲೂ ಹಣವಿಲ್ಲ
ಕೇಂದ್ರ ಸರ್ಕಾರ ಹಣ ನೀಡದೆ, ರಾಜ್ಯ ಸರ್ಕಾರ ನಡೆಯುತ್ತಿದೆಯೇ ಎಂದು ಪತ್ರಿಕಾಗೋಷ್ಠಿಯಲ್ಲಿ ಖಾರವಾಗಿ ನುಡಿದ ಅವರು, ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲು ನೀಡಲೂ ನಿಮ್ಮ ಬಳಿ ಹಣವಿಲ್ಲ.
ಇಲ್ಲದ, ಅಂಕಿ-ಅಂಶಗಳನ್ನು ಜನರ ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದೀರಿ, ಮೊದಲು ಜನರ ಸಮಸ್ಯೆ ಪರಿಹರಿಸಲು ಮುಂದಾಗಿ.
ಕಡು ಬೇಸಿಗೆ ಎದುರಾಗಿದೆ, ಕುಡಿಯುವ ನೀರಿನ ಸಮಸ್ಯೆ ಅಗಾಧವಾಗುತ್ತಿದೆ, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲವಾಗಿದೆ.
ಕನಿಷ್ಟ ರಸ್ತೆ ಗುಂಡಿ ಮುಚ್ಚಿ
ಮಳೆಗಾಲಕ್ಕೂ ಮುನ್ನವೇ ಕನಿಷ್ಟ ರಸ್ತೆ ಗುಂಡಿಗಳನ್ನಾದರೂ ಮುಚ್ಚಿ ಎಂದು ಸಲಹೆ ನೀಡಿದರು.
ಈ ನಡುವೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರಾಜಾರೋಷವಾಗಿ ಗಲಭೆಗಳು ನಡೆಯುತ್ತಿವೆ, ತಪ್ಪಿತಸ್ಥರ ವಿರುದ್ಧ ಕ್ರಮಗಳಾಗುತ್ತಿಲ್ಲ.
ಜಾತಿಗಣತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಅದರ ಅನುಷ್ಟಾನಕ್ಕೆ ಮನಸ್ಸು ಇಲ್ಲ, ಬರೀ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದೀರಿ.
ತೋರಿಕೆಗೆ ಜಾತಿ ಗಣತಿ ವರದಿ
ಜಾತಿ ಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂಬುದಾಗಿ ಆಡಳಿತಾರೂಢ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ, ಅವೈಜ್ಞಾನಿಕ ವರದಿ ಇಟ್ಟುಕೊಂಡು ಯಾವ ತೋರಿಕೆಗಾಗಿ ಅನುಷ್ಟಾನದ ಮಾತನ್ನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇನ್ನೊಂದೆಡೆ ಕರ್ನಾಟಕ ಲೋಕಸೇವಾ ಆಯೋಗದ ಕೆಲಸವನ್ನೂ ಹಾಳುಗೆಡವಿದ್ದೀರಿ, ನಿರುದ್ಯೋಗಿ ಯುವಜನರ ಬಾಳು ಹಾಳು ಮಾಡುತ್ತಿದ್ದೀರಿ ಎಂದು ಟೀಕಿಸಿದರು.
ಖಾಸಗಿ ಲೇವಾದೇವಿದಾರ (ಮೈಕ್ರೊ ಫೈನಾಸ್ಸ್) ಸಂಸ್ಥೆಗಳಿಂದ ಸಾಲ ಪಡೆದವರಿಗೆ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ತಂದಿದ್ದೀರಿ, ಕಿರುಕುಳ ನಿಂತಿದೆಯೇ ಎಂದು ಪ್ರಶ್ನಿಸಿದರು.