ಬೆಂಗಳೂರು:ಅರಣ್ಯ ತೊರೆದು ಜನ ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಕೆಲವು ಪುಂಡಾನೆಗಳಿಗಾಗಿ ಭದ್ರಾ ಕಾನನದಲ್ಲಿ ಆನೆ ಧಾಮ ನಿರ್ಮಿಸುವುದಾಗಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 150ಕ್ಕೂ ಹೆಚ್ಚು ಆನೆಗಳು ಕಾಡಿನಿಂದ ಹೊರಬಂದು ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿವೆ, ಅಂತಹ ಆನೆಗಳನ್ನು ಗುರುತಿಸಿದ್ದು ಮಿನಿ ಖೆಡ್ಡಾ ಮೂಲಕ ಬಂಧಿಸಿ ಆನೆ ಧಾಮಕ್ಕೆ ರವಾನಿಸಲಾಗುವುದು ಎಂದರು.
2,000 ಹೆಕ್ಟೇರ್‌ನಲ್ಲಿ ಆನೆಧಾಮ
ಭದ್ರಾ ಅರಣ್ಯ ಪ್ರದೇಶದ 2,000 ಹೆಕ್ಟೇರ್‌ನಲ್ಲಿ ಧಾಮ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ, ಇಲ್ಲಿ ಆನೆಗಳಿಗೆ ಅಗತ್ಯ ಆಹಾರ, ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು.
ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ಅರಣ್ಯ ಪ್ರದೇಶಗಳಿಂದ ಹೊರಬಂದು ಜನ ವಸತಿಗಳಿಗೆ ಲಗ್ಗೆ ಇಟ್ಟು ಮನುಷ್ಯರ ಪ್ರಾಣ ತೆಗೆಯುತ್ತಿವೆ.
ಕಳೆದ ಎರಡು ದಿನಗಳಲ್ಲಿ ಆನೆಗಳಿಗೆ ಮೂರು ಜನ ಬಲಿಯಾಗಿದ್ದಾರೆ, ಮೃತರ ಹತ್ತಿರದ ಸಂಬಂಧಿಕರಿಗೆ ಕೂಡಲೇ ಪರಿಹಾರದ ಮೊತ್ತ ನೀಡಲು ಸೂಚಿಸಲಾಗಿದೆ.
ಹಲವು ಯೋಜನೆ
ಕಾಡಿನಿಂದ ಆನೆ ಬರದಂತೆ ಹಲವು ಯೋಜನೆಗಳನ್ನು ರೂಪಿಸಿದರೂ ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗುತ್ತಿಲ್ಲ.
ಕಾಡಂಚಿನ ಜನರು ಅರಣ್ಯ ಇಲಾಖೆ ನೀಡುವ ಆನೆಗಳ ಚಲನವಲನದ ಬಗೆಗಿನ ಮುನ್ನೆಚ್ಚರಿಕೆಗೆ ಸ್ಪಂದಿಸಬೇಕು, ಎಲ್ಲ ದುರ್ಘಟನೆಗಳು ಬೆಳಗಿನ ಮತ್ತು ಸಂಜೆ ವೇಳೆ ಸಂಭವಿಸುತ್ತಿದ್ದು, ಜಾಗರೂಕರಾಗಿರಬೇಕು.
ಆನೆ-ಮಾನವ ಸಂಘರ್ಷ, ವನ್ಯಜೀವಿ-ಮಾನವ ಸಂಘರ್ಷ ಇಂದಿನ ಸಮಸ್ಯೆಯಲ್ಲ, ಸಾವಿರಾರು ವರ್ಷಗಳಿಂದಲೂ ಇದೆ, ಒಂದೆಡೆ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ, ಮತ್ತೊಂದೆಡೆ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.
ಟೆಂಟಕಲ್ ಫೆನ್ಸಿಂಗ್
ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ, ಆನೆ ಕಂದಕ ನಿರ್ಮಿಸಿ, ರೈಲ್ವೆ ಬ್ಯಾರಿಕೇಡ್‌ಗಳನ್ನೂ ಹಾಕಲಾಗುತ್ತಿದೆ.
2024-25ನೇ ಸಾಲಿನಲ್ಲಿ 78.917 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡಿದೆ, 41.87 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ, ಇನ್ನೂ 103 ಕಿ.ಮೀ. ಗುರಿ ನಿಗದಿ ಮಾಡಲಾಗಿದ್ದು, ಮಾರ್ಚ್ 31ರೊಳಗೆ ಕೆಲಸ ಆರಂಭವಾಗಲಿದೆ.
ದೇಶದಲ್ಲಿಯೇ ಅತಿ ಹೆಚ್ಚು ಅಂದರೆ,6,395 ಆನೆಗಳು ಕರ್ನಾಟಕದಲ್ಲಿವೆ, ಪುಂಡಾನೆ ಹಾವಳಿ ತಡೆಗೆ ಮಾರ್ಗೋಪಾಯ ಕಂಡುಹಿಡಿಯಲು ನೆರೆ ರಾಜ್ಯಗಳ ಸಚಿವರೊಂದಿಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶವನ್ನೂ ನಡೆಸಲಾಗಿದೆ, ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸಲಾಗುತ್ತಿದೆ, ಆನೆ ಕಾರ್ಯಪಡೆಯನ್ನೂ ರಚಿಸಲಾಗಿದೆ.
ಫಸಲು, ನೀರಿಗೆ ಬರುತ್ತಿವೆ
ಕಾಡಂಚಿನಲ್ಲಿ ಕೃಷಿ ಚಟುವಟಿಕೆ, ಕೆರೆಗಳನ್ನು ತುಂಬಿಸುವ ಕಾರ್ಯಗಳಿಂದಾಗಿ ಬಾಳೆ, ಹಲಸು, ಭತ್ತ ಇತ್ಯಾದಿ ಫಸಲು ತಿನ್ನಲು ಮತ್ತು ನೀರು ಕುಡಿಯಲು ಆನೆಗಳು ಊರಿಗೆ ಬರುತ್ತಿವೆ ಎಂಬುದು ತಜ್ಞರ ಅಭಿಪ್ರಾಯ.
ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.