ಬೆಂಗಳೂರು:ಕಾಂಗ್ರೆಸ್ ಸಿದ್ಧಾಂತದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು ಹಾಗೂ ಅವರ ಕಾರ್ಯಕ್ರಮಗಳು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ನಾಯಕತ್ವಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಣದ ಸಚಿವರು ಸಾಮೂಹಿಕ ನಾಯಕತ್ವದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ, ಇದರಲ್ಲಿ ಸಿದ್ದರಾಮಯ್ಯ ಪಾತ್ರ ಪ್ರಮುಖ ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಮತ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮುಖ ಮತ್ತು ಕಾಂಗ್ರೆಸ್‌ನ ಕಾರ್ಯಕ್ರಮಗಳಿಗೆ ಜನ ಮತ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡಿದ್ದಾರೆ, ಅದರಲ್ಲಿ ಎರಡು ಮಾತಿಲ್ಲ, ಆದರೆ, ಕಾಂಗ್ರೆಸ್‌ನಲ್ಲಿ ಎಲ್ಲರೂ ನಾಯಕರೇ.
ಅನೇಕ ನಾಯಕರಿದ್ದೇವೆ
ಕೆಳಹಂತದ ಕಾರ್ಯಕರ್ತ ಶ್ರಮಿಸದಿದ್ದರೆ ಪಕ್ಷ ಸಂಘಟನೆ ಆಗುವುದಿಲ್ಲ, ಇದು ಎಲ್ಲರಿಗೂ ತಿಳಿದಿರುವ ವಿಚಾರ, ನಮ್ಮಲ್ಲಿ ಡಾ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ನಾನು ಸೇರಿದಂತೆ ಅನೇಕ ನಾಯಕರಿದ್ದೇವೆ.
ನಮಗೂ, ಪಕ್ಷ ಮತ್ತು ಸರ್ಕಾರ ನಡೆಸುವ ಸಾಮರ್ಥ್ಯವಿದೆ, ಜನ ಬೆಂಬಲವೂ ಇದೆ, ಕಾಂಗ್ರೆಸ್‌ನಲ್ಲಿ ಯಾರೊಬ್ಬರಿಗೂ ಸರ್ವೋಚ್ಛ ಅಧಿಕಾರ ನೀಡಿಲ್ಲ ಎಂದಿದ್ದಾರೆ.
ಒಟ್ಟಿಗೆ ಹೋದರೇ ಪಕ್ಷ ಅಧಿಕಾರಕ್ಕೆ
ಶಿವಕುಮಾರ್ ಹೇಳಿಕೆಗೆ ಮತ್ತೊಂದೆಡೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್‌ನಲ್ಲಿ ಎಲ್ಲರೂ ನಾಯಕರೇ, ನಾವೆಲ್ಲ ಒಟ್ಟಿಗೆ ಸಂಘಟನಾತ್ಮಕವಾಗಿ ಹೋದಾಗಲೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ.
ಇದನ್ನು ಮಾಡಿ ತೋರಿಸಿದ್ದೇವೆ, ಯಾರೊಬ್ಬರೂ ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬುದು ಕಾಂಗ್ರೆಸ್‌ನಲ್ಲಿ ಇಲ್ಲ.
ಶಿವಕುಮಾರ್ ಏನೋ ಹೇಳಿರಬಹುದು, ನಂತರ ಅವರೂ ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.