ಬೆಂಗಳೂರು:ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಆದೇಶ ಮಾಡಿದೆ.
ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ತುಮಕೂರಿನ ಕೆಲವು ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈ ಸಾಂಕ್ರಾಮಿಕ ರೋಗ ಕಂಡು ಬಂದಿದೆ.
ರೋಗ ಪತ್ತೆಗೆ ಸ್ಯಾಂಪಲ್
ಸಾಮೂಹಿಕವಾಗಿ ಕೋಳಿಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ರೋಗ ಪತ್ತೆಗೆ ಬೋಪಾಲ್‌ನ ಸಂಶೋಧನಾ ಕೇಂದ್ರಕ್ಕೆ ಮೃತ ಕೋಳಿಗಳ ಸ್ಯಾಂಪಲ್ ಕಳುಹಿಸಲಾಗಿದೆ.
ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಕುಕ್ಕುಟ ಉದ್ಯಮ ನೆಲೆ ಕಚ್ಚಿದೆ, ಮುಂದಿನ ದಿನಗಳಲ್ಲಿ ಕೋಳಿ ಸಾಕಾಣಿಕೆದಾರರಿಗೆ ನಷ್ಟ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ರೋಗ ಕಂಡುಬಂದ ಕಡೆಗಳ ಪ್ರದೇಶದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಶುಸಂಗೋಪನಾ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಎಲ್ಲಾ ಕೋಳಿಗಳನ್ನು ಸಾಯಿಸುತ್ತಿದೆ.
ಎಚ್5ಎನ್ ಏವಿಯನ್ ಇನ್ಫ್ಲೂಯೆನ್ಸಾ
ಪ್ರಾಥಮಿಕ ವರದಿ ಪ್ರಕಾರ ಮೃತ ಕೋಳಿಗಳಲ್ಲಿ ಎಚ್5ಎನ್ ಏವಿಯನ್ ಇನ್ಫ್ಲೂಯೆನ್ಸಾ ರೋಗಾಣು ಇರುವುದು ಪತ್ತೆಯಾಗಿದೆ.
ಇದು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಎರಡೂ ಇಲಾಖೆಗಳು ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಲ್ಲದೆ, ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಈ ರೋಗ ಪಕ್ಷಿಗಳಿಂದ ಕೋಳಿಗೆ ಹರಡಿರಬಹುದು ಎಂಬ ಸಂಶಯವಿದೆ, ಆದರೆ, ಇದುವರೆಗೂ ಈ ರೋಗ ಮನುಷ್ಯರಿಗೆ ತಗುಲಿರುವ ವರದಿ ಇಲ್ಲ.
ಆರೋಗ್ಯ ಇಲಾಖೆ ಆತಂಕ
ಮೊದಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಎರಡು-ಮೂರು ದಿನಗಳಲ್ಲೇ ರಾಜ್ಯದ ಇತರೆ ಭಾಗಗಳಿಗೆ ಹರಡಿರುವುದರಿಮದ ಆರೋಗ್ಯ ಇಲಾಖೆ ಆತಂಕಗೊಂಡಿದೆ.
ಈ ಹಿನ್ನೆಲೆಯಲ್ಲೇ ಕಟ್ಟೆಚ್ಚರ ವಹಿಸುವ ಜೊತೆಗೆ ವಿವಿಧ ಭಾಗಗಳ ಕೋಳಿಗಳ ರೋಗ ಪರೀಕ್ಷೆಗೆ ಮುಂದಾಗಿದೆ.
ಬೇಸಿಗೆ ಸಂದರ್ಭದಲ್ಲಿ ಕೋಳಿಗಳಿಗೆ ಹಕ್ಕಿ ಜ್ವರ ತಗಲುವುದು ಸಾಮಾನ್ಯ, ರೋಗಕ್ಕೆ ತುತ್ತಾದ ಕೋಳಿ ಮಾಂಸ ಸೇವನೆ ಮಾಡಿದರೆ ಮನುಷ್ಯನಿಗೂ ಸಾಂಕ್ರಾಮಿಕ ರೋಗ ತಗಲುವ ಸಾಧ್ಯತೆ ಇದೆ.
ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸಿ
ಕೋಳಿ ಮಾಂಸ ತಿನ್ನುವ ಮೊದಲು ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸಿ ಬಳಸಿದರೆ ದುಷ್ಪರಿಣಾಮ ಉಂಟಾಗದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹಕ್ಕಿ ಜ್ವರ ಕಾಣಿಸಿಕೊಂಡಿರುವ ಪ್ರದೇಶಕ್ಕೆ ಹತ್ತಿರದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಇಲಾಖೆ ಸೂಚಿಸಿದೆ.
ಅಲ್ಲದೆ, ರೋಗ ಕಾಣಿಸಿಕೊಂಡ ವ್ಯಕ್ತಿಗಳಿಗೆ ಅಗತ್ಯ ಔಷಧ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆಯೂ ತಿಳಿಸಲಾಗಿದೆ.