ಬೆಂಗಳೂರು:ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯದಲ್ಲಿ ಮಾರ್ಚ್ 15 ರಂದು ಖುದ್ದು ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಲಾಗಿದೆ.
ಇತರ ಆರೋಪಿಗಳಿಗೂ ಸಮನ್ಸ್
ಯಡಿಯೂರಪ್ಪ ಅಲ್ಲದೆ, ಸಹ ಆರೋಪಿಗಳಾದ ಅರುಣಾ, ರುದ್ರೇಶ್, ಮರುಳುಸಿದ್ದಯ್ಯ, ಜೆ.ಮರಿಸ್ವಾಮಿ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ನೀಡಲಾಗಿತ್ತು.
ಪ್ರಕರಣ ರದ್ದತಿ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಧಾರವಾಡ ಪೀಠ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ವಿಚಾರಣೆ ಎದುರಿಸಲೇಬೇಕು
ಪ್ರಕರಣ ರದ್ದು ಮಾಡಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ ನಿರಾಕರಿಸಿತ್ತಾದರೂ, ಬಂಧನದಿಂದ ರಿಲೀಫ್ ದೊರೆತಿತ್ತು, ಆದರೆ, ಇದೀಗ ಯಡಿಯೂರಪ್ಪ ವಿಚಾರಣೆ ಎದುರಿಸಲೇಬೇಕಿದೆ.
ಪ್ರಕರಣದ ಹಿನ್ನೆಲೆ ನೋಡಿದಾಗ, 17 ವರ್ಷದ ಬಾಲಕಿ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು 2024ರ ಮಾರ್ಚ್‌ನಲ್ಲಿ ಹೊರಿಸಲಾಗಿತ್ತು.
ಸಂತ್ರಸ್ತೆ ಬಾಲಕಿ ತಾಯಿ ಈ ಆರೋಪ ಮಾಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಲೈಂಗಿಕ ಕಿರುಕುಳ ದೂರು
ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದರು ಎಂಬುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧವೂ ಸಂತ್ರಸ್ತೆ ತಾಯಿ ದೂರು ನೀಡಿದ್ದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು, ಪೋಕ್ಸೋ ಹಾಗೂ 354 (ಎ) ಅಡಿ ಪ್ರಕರಣ ದಾಖಲಿಸಿದ್ದು, ಕೆಲವು ದಿನಗಳವರೆಗೆ ಈ ವಿಷಯ ರಾಜಕೀಯವಾಗಿ ಸದ್ದು ಮಾಡಿತ್ತು.
ದೂರುದಾರ ಮಹಿಳೆ ಸಾವು
ಈ ಮಧ್ಯೆ, ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ದೂರುದಾರ ಮಹಿಳೆ 2024ರ ಮೇನಲ್ಲಿ ಮೃತಪಟ್ಟರು.
ಪ್ರಕರಣದ ವಿಚಾರಣೆಯನ್ನು ಈಗ ಕೈಗೆತ್ತಿಕೊಂಡಿರುವ ನ್ಯಾಯಾಲಯ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.