ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರೊಬ್ಬರಿಗೆ ಕಾಂಗ್ರೆಸ್ ಪಕ್ಷದ ಮುಖಂಡನೊಬ್ಬ ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಿ ’ಗೂಸಾ’ ತಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯದ ನಾಯಕತ್ವಕ್ಕೆ ಸಂಬಂಧಿಸಿದಂತೆ ಸದಾ ವಿವಾದಿತ ಹೇಳಿಕೆಗಳನ್ನು ನೀಡಿ ಪಕ್ಷದ ವರಿಷ್ಠರಿಗೂ ಇರಿಸು-ಮುರಿಸು ಆಗುವಂತೆ ಮಾಡುತ್ತಿದ್ದ ಈ ಮಂತ್ರಿಯನ್ನು ಹನಿಟ್ರ್ಯಾಪ್‌ನಲ್ಲಿ ಬೀಳಿಸಲು ಐದು ಮಂದಿ ತಂಡ ಪ್ರಯತ್ನಿಸಿತ್ತು.
ವರ್ತನೆಯಿಂದ ಸಂಶಯ
ಸಚಿವರಿಗೆ ಮೊದಲು, ಇವರ ನಾಟಕ ತಿಳಿಯಲಿಲ್ಲ, ನಂತರ ಅವರ ವರ್ತನೆ ಬಗ್ಗೆ ಅನುಮಾನಗೊಂಡು ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಕೊಠಡಿಯ ಹೊರಗಿದ್ದ ಸಚಿವರ ಅನುಯಾಯಿಗಳು ಮತ್ತು ಕಾರ್ಯಕರ್ತರು ಹನಿಟ್ರ್ಯಾಪ್ ಮಾಡಲು ಬಂದಿದ್ದ ತಂಡಕ್ಕೆ ಹಿಗ್ಗಾಮುಗ್ಗ ಗುದ್ದಿದರು.
ಅಷ್ಟೇ ಅಲ್ಲ, ಏತಕ್ಕೆ ಬಂದಿದ್ದರು ಎಂಬ ಮಾಹಿತಿಯನ್ನೂ ಅವರಿಂದಲೇ ಬಾಯಿಂದಲೇ ಬಿಡಿಸಿದ್ದಲ್ಲದೆ, ಹನಿಟ್ರ್ಯಾಪ್‌ಗಾಗಿ ತಂದಿದ್ದ ಸೂಕ್ಷ್ಮ ಕ್ಯಾಮೆರಾಗಳನ್ನು ಕಸಿದುಕೊಂಡರು.
ದೂರು ದಾಖಲಾಗಿಲ್ಲ
ಹನಿಟ್ರ್ಯಾಪ್ ಗೂಸಾ ಘಟನೆ ಬಗ್ಗೆ ಇದುವರೆಗೆ ಮಂತ್ರಿಯಿಂದಾಗಲೀ, ಒದೆ ತಿಂದವರಿಂದಾಗಲೀ ದೂರು ದಾಖಲಾಗಿಲ್ಲ.
ಘಟನೆ ನಂತರ ಸಚಿವರು, ತಮ್ಮ ಆಪ್ತ ಸಹೋದ್ಯೋಗಿಗಳಿಗೆ ಮತ್ತು ಕೆಲವು ಮುಖಂಡರಿಗೆ ಮಾಹಿತಿ ನೀಡಿ, ಸಾರ್ವಜನಿಕ ಬದುಕಿನಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಿದ್ದಾರೆ.
ಹಣ ವಸೂಲಿ, ಬೆದರಿಕೆ ಹಾಗೂ ತಮ್ಮ ಕೆಲಸ ಸಾಧಿಸಲು ಕರ್ನಾಟಕದಲ್ಲಿ ಹನಿಟ್ರ್ಯಾಪ್ ತಂಡಗಳೇ ಹುಟ್ಟಿಕೊಂಡಿವೆ.
ಈ ಟ್ರ್ಯಾಪ್‌ಗಳಿಗೆ ಸಚಿವರು, ರಾಜಕಾರಣಿಗಳು, ಉದ್ದಿಮೆದಾರರು ಭಾರೀ ಬೆಲೆ ತೆತ್ತಿದ್ದಾರೆ.
ಕಾರ್ಯಕರ್ತರ ಸೋಗಿನಲ್ಲಿ
ಮಂತ್ರಿಯನ್ನು ಹನಿಟ್ರ್ಯಾಪ್ ಮಾಡಲು ಕಾರ್ಯಕರ್ತರ ಸೋಗಿನಲ್ಲಿ ತೆರಳಿದ್ದ ತಂಡದ ರೂವಾರಿ ಕಾಂಗ್ರೆಸ್‌ನ ಪ್ರಭಾವೀ ಕಾರ್ಯಕರ್ತನಿಗೂ ಸರಿಯಾದ ಗೂಸಾಗಳು ಬಿದ್ದಿವೆ.
ಇತ್ತೀಚೆಗಂತೂ ರಾಜಕಾರಣಿಗಳು ಹನಿಟ್ರ್ಯಾಪ್ ಎಂದರೆ, ಭೂತ ಕಂಡವರಂತೆ ಬೆಚ್ಚಿ ಬೀಳುತ್ತಾರೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ತಮ್ಮ ವಿರೋಧಿಗಳನ್ನು ಹಣಿಯಲು ಇಂತಹ ಸಂಚುಗಳು ನಡೆಯುತ್ತಲೇ ಇವೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮಣಿರತ್ನ ಅವರುಗಳು ಇತ್ತೀಚೆನ ದಿನಗಳಲ್ಲಿ ಹನಿಟ್ರ್ಯಾಪ್‌ಗೆ ಸಿಲುಕಿದ ಪ್ರಮುಖರು.
ಅಧಿಕಾರ ಕಳೆದುಕೊಂಡವರು
ಬಿಜೆಪಿ ಆಡಳಿತದಲ್ಲಿ ಪ್ರಭಾವೀ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕ ಶಾಸಕರು ಹನಿಟ್ರ್ಯಾಪ್‌ಗೆ ಒಳಗಾಗಿ ಅಧಿಕಾರ ಕಳೆದುಕೊಂಡಿದ್ದರು.
ಅದರಲ್ಲೂ ಪಕ್ಷದ ಕೆಲವು ಶಾಸಕರು ಮತ್ತು ಮುಖಂಡರು ಹನಿಟ್ರ್ಯಾಪ್‌ನಿಂದಾಗಿ ಚುನಾವಣಾ ಟಿಕೆಟ್‌ನಿಂದಲೂ ವಂಚಿತರಾಗಬೇಕಾಯಿತು.