ಬೆಂಗಳೂರು:ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಾಧ್ಯವಿಲ್ಲ ಎಂದಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಬಂದ್‌ಗೆ ಕರೆ ನೀಡಿರುವ ದಿನವೂ ಎಂದಿನಂತೆ ಪರೀಕ್ಷೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯೋಮಿತಿ ಸಡಿಲಿಕೆ ವಿಚಾರದಲ್ಲಿ ಮಕ್ಕಳ ಪರವಾಗಿ ನನ್ನ ಬೆಂಬಲವೂ ಇದೆ, ಆದರೆ ಕಾನೂನಿಗೆ ವಿರುದ್ಧವಾಗಿ ಸರ್ಕಾರ ಹೋಗಲು ಸಾಧ್ಯವಿಲ್ಲ.
ನಾವು ನಿಸ್ಸಹಾಯಕರು
ಒಂದನೇ ತರಗತಿ ಪ್ರವೇಶ ವಯೋಮಿತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ತೀರ್ಪು ನೀಡಿವೆ, ಇನ್ನು ಕೆಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ, ನ್ಯಾಯಾಲಯ ತೀರ್ಪು ನೀಡುವವರೆಗೂ ನಾವು ನಿಸ್ಸಹಾಯಕರು ಎಂದರು.
ಕೆಲವು ಪೋಷಕರು, ಒಂದನೇ ತರಗತಿ ಪ್ರವೇಶಕ್ಕೆ ತಮ್ಮ ಮಕ್ಕಳ ವಯೋಮಿತಿ ಏಳು ದಿನ ಕಡಿಮೆ ಇದೆ ಎನ್ನುತ್ತಾರೆ, ಇನ್ನು ಕೆಲವರು ಎರಡು-ಮೂರು ತಿಂಗಳು ಎನ್ನುತ್ತಾರೆ, ಅವರ ಸಂಕಷ್ಟ ನನಗೆ ಅರ್ಥವಾಗುತ್ತದೆ.
ಪ್ರಸಕ್ತ ಸಾಲಿಗೆ ಪ್ರವೇಶಾವಕಾಶ ತಪ್ಪಿದರೆ ಮಕ್ಕಳ ಒಂದು ವರ್ಷ ವ್ಯರ್ಥವಾಗುತ್ತದೆ ಎಂದೆಲ್ಲಾ ಅಳಲು ತೋಡಿಕೊಳ್ಳುತ್ತಿದ್ದಾರೆ, ಆದರೆ, ಒಂದು ದಿನ ಕಡಿಮೆಯಾದರೂ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದರು.
ಎಂದಿನಂತೆ ಪರೀಕ್ಷೆ
ಕರ್ನಾಟಕ ಬಂದ್ ದಿನದಂದು 7, 8, 9ನೇ ತರಗತಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ, ಕನ್ನಡ ಸಂಘಟನೆಗಳು ಕರೆದಿರುವ ಬಂದ್ ಹಿನ್ನೆಲೆಯಲ್ಲಿ ನಾವು ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ.
ಮಕ್ಕಳು ಪರೀಕ್ಷೆ ಬರೆಯಲು ಹೋಗುತ್ತಾರೆ ಎಂದರೆ, ಬಂದ್ ಕರೆ ನೀಡಿರುವವರೂ ಅಡ್ಡಿಪಡಿಸಲಾರರು, ಬೇಕಿದ್ದರೆ, ಬಂದ್ ಕರೆ ನೀಡಿರುವ ಪ್ರಾಯೋಜಕರೇ ಬಂದ್ ದಿನವನ್ನು ಬದಲಿಸಿಕೊಳ್ಳಲಿ ಎಂದರು.