ಬೆಂಗಳೂರು:ರಾಜ್ಯದ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳಲ್ಲಿ ಒಂದೊಂದು ದರ ಇದ್ದ ಕಾರಣ ಮನೆ ಮನೆಗೆ ಅಡುಗೆ ಅನಿಲ (ಎಲ್‌ಪಿಜಿ ಗ್ಯಾಸ್) ಸಂಪರ್ಕ ಒದಗಿಸಲು ವಿಳಂಬವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈಗ ಸಮಸ್ಯೆ ಬಗೆಹರಿದಿದ್ದು, 2030ರೊಳಗೆ ಉಳಿದ 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದರು.
ಮೀಟರ್‌ಗೆ ಒಂದು ರೂ. ನಿಗದಿ
ವಿಧಾನ ಪರಿಷತ್‌ನಲ್ಲಿ ಡಿ.ಎಸ್.ಅರುಣ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಗ್ಯಾಸ್ ಪೂರೈಕೆ ಕೊಳವೆ ಅಳವಡಿಸಲು ವಿವಿಧ ರಾಜ್ಯಗಳಲ್ಲಿನ ನಗರ ಅನಿಲ ಸರಬರಾಜು ನೀತಿ ಅನ್ವಯ ಮೀಟರ್‌ಗೆ ಒಂದು ರೂ. ನಿಗದಿಪಡಿಸಲಾಗಿದೆ.
ಸಾರ್ವಜನಿಕ ಹಿತ ಮತ್ತು ಪರಿಸರಸ್ನೇಹಿ ಕ್ರಮ ಎಂಬ ಕಾರಣಕ್ಕೆ ನಾವೂ ಒಪ್ಪಿಕೊಂಡಿದ್ದೇವೆ, ರಾಜ್ಯದಲ್ಲಿ ಒಟ್ಟು 66.25 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು 1,022 ಸಿಎನ್‌ಜಿ ಮರುಪೂರಣ ಕೇಂದ್ರ ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
4.07 ಲಕ್ಷ ಮನೆಗೆ ಗ್ಯಾಸ್ ಪೂರೈಕೆ
ಈ ಯೋಜನೆ 2015ರಲ್ಲಿ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಕಾಮಗಾರಿ ಕೈಗೆತ್ತಿಕೊಂಡಿತು, 2023ರವರೆಗೆ 4.17 ಲಕ್ಷ ಮನೆಗಳಿಗೆ ಗ್ಯಾಸ್ ಪೂರೈಕೆ ಸಂಪರ್ಕ ಕೊಟ್ಟಿದೆ, 320 ಸಿಎನ್‌ಜಿ ಕೇಂದ್ರ ತೆರೆಯಲಾಗಿದೆ.
ಹೊಸ ನೀತಿ ರೂಪಿಸಿದ ನಂತರ ಇನ್ನೂ 1.01 ಲಕ್ಷ ಮನೆಗಳಿಗೆ ಸೌಲಭ್ಯ ಒದಗಿಸಿದ್ದು, 154 ಸಿಎನ್‌ಜಿ ಕೇಂದ್ರ ಆರಂಭಿಸಲಾಗಿದೆ, ಮತ್ತಷ್ಟು ವೇಗ ನೀಡಲು ಸ್ಥಳೀಯ ನಗರ ಸಂಸ್ಥೆಗಳ ಜತೆ ಸಮನ್ವಯ ಸಭೆ ಮಾಡಲಾಗುತ್ತಿದೆ.
474 ಸಿಎನ್‌ಜಿ ಕೇಂದ್ರ ಕಾರ್ಯಾರಂಭ
ಯೋಜನೆಯಡಿ ಇದುವರೆಗೂ ಒಟ್ಟು 5.10 ಲಕ್ಷ ಮನೆಗಳಿಗೆ ಸೌಲಭ್ಯ ಒದಗಿಸಲಾಗಿದೆ, 474 ಸಿಎನ್‌ಜಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ, ಮುಂದಿನ ಐದು ವರ್ಷಗಳಲ್ಲಿ ಬಾಕಿ ಗುರಿ ತಲುಪಲಾಗುವುದು.
ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ಮೀಟರ್‌ಗೆ ಒಂದು ರೂ. ನಿಗದಿಪಡಿಸಿದ್ದು, ಇದರ ಲಾಭವನ್ನು ಅನಿಲ ಸರಬರಾಜು ಕಂಪನಿಗಳು ನಂತರದ ದಿನಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಬೇಕು ಎಂಬುದಾಗಿ ಮುಚ್ಚಳಿಕೆ ಬರೆಸಿಕೊಳ್ಳಾಗಿದೆ, ಅಲ್ಲದೆ, ಹೊಸ ನೀತಿಯಲ್ಲೂ ಅಳವಡಿಸಲಾಗಿದೆ ಎಂದರು.