ಬೆಂಗಳೂರು:ಪ್ರಸಕ್ತ ಬೇಸಿಗೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್ ಪೂರೈಕೆಯಲ್ಲಿ ಕಡಿತವಿಲ್ಲ, ಗ್ರಾಮೀಣ ಭಾಗದಲ್ಲಿ ನಿರಂತರ 24 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಇಂದು ಸ್ಪಷ್ಟಪಡಿಸಿದ್ದಾರೆ.
ಶೂನ್ಯವೇಳೆಯಲ್ಲಿ ಸಿದ್ದು ಸವದಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಅಗಾಧ ವಿದ್ಯುತ್ ಬೇಡಿಕೆ ಇದ್ದರೂ, ಕೃಷಿ ಹಾಗೂ ಶಿಕ್ಷಣ ಕಲಿಕೆಗೆ ಯಾವುದೇ ಕಾರಣಕ್ಕೂ ಕಡಿತ ಮಾಡುವುದಿಲ್ಲ.
ಏಪ್ರಿಲ್, ಮೇ ಬೇಡಿಕೆ
ಏಪ್ರಿಲ್, ಮೇನಲ್ಲಿ ಬೇಡಿಕೆ 19,000 ಮೆಗಾ ವ್ಯಾಟ್ ತಲುಪಬಹುದೆಂಬ ನಿರೀಕ್ಷೆ ಇದೆ, ಅದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ.
ವಿದ್ಯುತ್ ಪೂರೈಕೆ ಒತ್ತಡದಿಂದ ಕೆಲವು ಬಾರಿ ತಾತ್ಕಲಿಕವಾಗಿ ಸರಬರಾಜಿನಲ್ಲಿ ಅಡಚಣೆ ಉಂಟಾಗಬಹುದೇ ಹೊರತು, ಉಳಿದ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಕಡಿತವಾಗಲೀ, ಲೋಡ್‌ಶೆಡ್ಡಿಂಗ್ ಆಗಲಿ ಮಾಡುವುದಿಲ್ಲ.
ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಿ, ಎಲ್ಲಿ ಏನೇ ಸಮಸ್ಯೆ ಉದ್ಭವಿಸಿದರೂ, ತಕ್ಷಣ ಅವರ ಗಮನಕ್ಕೆ ತಂದು ಪರಿಹರಿಸಿ ಎಂದು ಮಾನವಿ ಮಾಡಿದರು.
ರಾಜ್ಯದಲ್ಲಿ ಉತ್ತಮ ಮಳೆ
ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿ ಬೇಸಿಗೆಯಲ್ಲೂ ಅಣೆಕಟ್ಟೆಗಳು ಶೇಕಡ 70ರಷ್ಟು ನೀರಿನ ಸಂಗ್ರಹ ಹೊಂದಿವೆ.
ಸಂಗ್ರಹಿತ ನೀರನ್ನು ಬೇಸಿಗೆಯಲ್ಲಿ ಕೃಷಿಗೆ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ, ಹೀಗಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲ ಎಂದರು.