ಬೆಂಗಳೂರು:ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆರೋಪಿಸಿದ್ದಾರೆ.
ಮುಸ್ಲಿಮರನ್ನು ಓಲೈಸಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತರ ಎಲ್ಲ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಆರ್ಥಿಕ ಶಕ್ತಿ ತುಂಬಬೇಕಿತ್ತು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಿಜವಾಗಿಯೂ ಅಹಿಂದ ನಾಯಕರೇ ಆಗಿದ್ದರೆ, ಈ ವೇಳೆಗಾಗಲೇ ಅನೇಕ ಹಿಂದುಳಿದ ಸಮಾಜಗಳಿಗೆ ಆರ್ಥಿಕ ಶಕ್ತಿ ತುಂಬಬೇಕಿತ್ತು, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿತ್ತು ಎಂದರು.
ಮಡಿವಾಳರು, ಸವಿತಾ ಸಮಾಜ ಸೇರಿ ಅನೇಕ ಕಾಯಕ ಸಮುದಾಯಗಳು ನಾಡಿನಲ್ಲಿವೆ, ಈ ಸಮುದಾಯಗಳಿಗೆ ಆರ್ಥಿಕ ಶಕ್ತಿ ತುಂಬಿ ಮುಂದೆ ತರುವ ಕೆಲಸ ಮಾಡುತ್ತಿಲ್ಲ.
ಗುತ್ತಿಗೆ ಕಾಮಗಾರಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನಿರ್ಧಾರ ಕೈಕೊಳ್ಳಲು ಹೊರಟಿದ್ದಾರೆ, ಅಲ್ಪಸಂಖ್ಯಾತರೆಂದರೆ ಮುಸ್ಲಿಮರು ಮಾತ್ರವೇ, ಬೇರೆ ಯಾವ ಸಮುದಾಯವೂ ಅಲ್ಪಸಂಖ್ಯಾತರ ವರ್ಗದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.
ಜನರಿಂದ ತಕ್ಕ ಪಾಠ
ಮುಸ್ಲಿಮರ ಓಲೈಕೆಗೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ, ದಪ್ಪ ಚರ್ಮ ಬೆಳೆಸಿಕೊಂಡಿರುವ ಸರ್ಕಾರ ಭಂಡತನ ಪ್ರದರ್ಶಿಸುತ್ತಿದೆ.
ವಿರೋಧ ಪಕ್ಷಗಳ ಮಾತಿಗೇ ಬೆಲೆಯೇ ಇಲ್ಲವಾಗಿದೆ, ಏನೇ ಸಲಹೆ ನೀಡಿದರೂ ನಾಟುತ್ತಿಲ್ಲ, ಸರ್ಕಾರದ ಮುಸ್ಲಿಂ ಓಲೈಕೆ ನಿರ್ಧಾರವನ್ನು ಸದನದಲ್ಲಿ ಪ್ರಶ್ನಿಸುತ್ತೇವೆ.
ಗ್ಯಾರಂಟಿ ಯೋಜನೆಗಳೂ ಸರಿಯಾಗಿ ಅನುಷ್ಟಾನವಾಗುತ್ತಿಲ್ಲ, ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆ ಆಗುತ್ತಿವೆ.
ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ
ಕಳೆದ 20 ತಿಂಗಳಿನಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಟ್ಟಿಲ್ಲ, ಯಾವುದೇ ಶಾಸಕರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗಿಲ್ಲ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದರೂ ಎಲ್ಲಿಯೂ ಕೆಲಸ ನಡೆಯುತ್ತಿಲ್ಲ.
ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲ ಸಮಾಜಗಳ ಧ್ವನಿಯಾಗಿ ಹೋರಾಟ ಮಾಡಿದ ಬಿ.ಎಸ್.ಯಡಿಯೂರಪ್ಪ 4 ಬಾರಿ ಮುಖ್ಯಮಂತ್ರಿಯಾಗಿದ್ದರು ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ತಿಂಗಳ 7ರಂದು ಕರ್ನಾಟಕಕ್ಕೆ ಆಗಮಿಸಲಿದ್ದು ಬೆಂಗಳೂರಿನಲ್ಲಿ ವಿಶ್ವತೀರ್ಥ ಮಹಾಸ್ವಾಮೀಜಿ ಅವರ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಅಂದು ಪಕ್ಷದ ಯಾವುದೇ ರಾಜಕೀಯ ಸಭೆಗಳು ಇರುವುದಿಲ್ಲ ಎಂದು ವಿವರ ನೀಡಿದರು.