ಬೆಂಗಳೂರು:ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೋಳಿ ಮೊಟ್ಟೆ ಮತ್ತು ಮಾಂಸ ಸೇವಿಸುವಾಗ ಕಟ್ಟುನಿಟ್ಟಾಗಿ ಎಚ್ಚರಿಕೆಗಳನ್ನು ಪಾಲಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹಕ್ಕಿ ಜ್ವರದಿಂದ ಆತಂಕ ಪಡುವ ಅಗತ್ಯವಿಲ್ಲ, ಆದರೆ, ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಆತಂಕ ಪಡುವ ಅಗತ್ಯವಿಲ್ಲ
ಹಕ್ಕಿ ಜ್ವರ ಸಾಂಕ್ರಾಮಿಕ ರೋಗವಾದರೂ ಅದು ಮನುಷ್ಯರಿಗೆ ಹರಡುವುದು ಅಪರೂಪ, ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ, ಆದರೆ, ಎಚ್ಚರಿಕೆಯಿಂದಿರಿ.
ಕೋಳಿ ಮೊಟ್ಟೆ ಮತ್ತು ಮಾಂಸ ಸೇವಿಸುವಾಗ ಕೆಲವು ಎಚರಿಕೆಗಳನ್ನು ಪಾಲಿಸಿ, ಸೇವನೆಗೂ ಮುನ್ನ ಇವುಗಳನ್ನು 70 ಡಿಗ್ರಿ ಉಷ್ಣಾಂಶದಲ್ಲಿ ಅಂದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ಬೇಯಿಸಿ ಸೇವಿಸಬೇಕು.
ಸೋಂಕು ಪೀಡಿತ ಕೋಳಿ ಫಾರಂ, ಮೃತ ಹಕ್ಕಿ ಅಥವಾ ಕೋಳಿಗಳ ಸಮೀಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರ
ರಾಜ್ಯದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವರು ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.
ಹಕ್ಕಿ ಜ್ವರ ಕೆಲವೆಡೆ ವ್ಯಾಪಕವಾಗಿ ಹರಡಿ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಗುತ್ತಿದೆ.
ಸೋಂಕು ಕಾಣಿಸಿಕೊಂಡ ಪ್ರದೇಶದ ಒಂದು ಕಿಲೋ ಮೀಟರ್ ವ್ಯಾಪ್ತಿಯ ಸುತ್ತಲ ಪ್ರದೇಶಗಳಲ್ಲಿ ಕೋಳಿಗಳನ್ನು ಕೊಲ್ಲಲಾಗುತ್ತಿದೆ, ಆದರೂ, ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ.