ಬೆಂಗಳೂರು:ಸಹಕಾರಿ ಇಲಾಖೆ ಅಡಿಯಲ್ಲಿ ಬರುವ ಅಪೆಕ್ಸ್ ಬ್ಯಾಂಕ್, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸೇರಿದಂತೆ ಕೆಲವು ಸಂಸ್ಥೆಗಳಿಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನಡುವೆ ಬಹಿರಂಗ ಗುದ್ದಾಟ ನಡೆದಿದೆ.
ಶಿವಕುಮಾರ್ ಶಿಫಾರಸು ಮಾಡುವ ಯಾವುದೇ ಅಭ್ಯರ್ಥಿಗಳನ್ನು ನನ್ನ ಇಲಾಖೆಯಡಿ ಬರುವ ಸಂಸ್ಥೆಗಳಿಗೆ ನೇಮಕ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಸ್ಪಷ್ಟವಾಗಿ ತಿಳಿಸಿರುವುದಲ್ಲದೆ, ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನೂ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ
ಇದನ್ನರಿತ ಶಿವಕುಮಾರ್, ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ರಾಜಣ್ಣ ವಿರುದ್ಧ ದೂರು ನೀಡಿರುವುದಲ್ಲದೆ, ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ.
ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಹಕಾರಿ ಇಲಾಖೆಯಲ್ಲಿ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿ ಆಗಬೇಕಿದೆ, ಈ ವಿಷಯದಲ್ಲಿ ಅವರು ನಮ್ಮನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಖರ್ಗೆ ಅವರು, ರಾಜಣ್ಣ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ, ಈ ವಿಷಯದ ಬಗ್ಗೆ ಚರ್ಚೆ ಮಾಡಿ, ಮುಂದೆ ನೋಡೋಣ ಎಂದು ತಿಳಿ ಹೇಳಿದ್ದಾರೆ.
ಸಹಕಾರಿ ದಿಗ್ಗಜರ ಸಭೆ
ಖರ್ಗೆ ಅವರ ಸಲಹೆಯಂತೆ ಶಿವಕುಮಾರ್ ಮಂಗಳವಾರ ಮಧ್ಯಾನ್ಹ ರಾಜಣ್ಣ ಅವರಿಗೆ ಮಾಹಿತಿ ನೀಡಿ, ವಿಧಾನಸೌಧದಲ್ಲಿನ ಅವರ ಕಚೇರಿಗೆ ತೆರಳಿ, ಪಕ್ಷದ ಸಹಕಾರಿ ದಿಗ್ಗಜರ ಜೊತೆ ಸಭೆ ಮಾಡಿದರು.
ಆದರೆ, ಈ ಸಭೆಗೆ ರಾಜಣ್ಣ ಬರಲೇ ಇಲ್ಲ, ನಂತರ ಶಿವಕುಮಾರ್ ಅವರೇ ಉಳಿದವರೊಂದಿಗೆ ಚರ್ಚೆ ನಡೆಸಿ ತೆರಳಿದ್ದಾರೆ.
ತಮ್ಮನ್ನೇ ಸಂಪುಟದಿಂದ ಕೈಬಿಡುವಂತೆ ವರಿಷ್ಠರಿಗೆ ದೂರು ನೀಡಿರುವ ಶಿವಕುಮಾರ್ ವಿರುದ್ಧ ಸಿಡಿದೆದ್ದಿರುವ ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ವಾಲ್ಮೀಕಿ ಸಮುದಾಯದ, ಪಕ್ಷಕ್ಕೆ ಸೇರಿದ 17 ಶಾಸಕರ ಸಭೆ ನಡೆಸಿದ್ದಾರೆ.
ಹಸ್ತಕ್ಷೇಪ ಮಾಡಬಾರದು
ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡಬಾರದೆಂದು ಮುಖ್ಯಮಂತ್ರಿ ಅವರನ್ನು ಸಭೆ ಒತ್ತಾಯಿಸಿರುವುದಲ್ಲದೆ, ಲೋಕೋಪಯೋಗಿ ಮತ್ತು ಸಹಕಾರಿ ಇಲಾಖೆಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಬಾರದೆಂಬ ಮನವಿ ಮಾಡಲು ತೀರ್ಮಾನ ಕೈಗೊಂಡಿದೆ.
ಶಿವಕುಮಾರ್ ತಮ್ಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೂ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಸಂಬಂಧಿ ವಿಧಾನ ಪರಿಷತ್ ಸದಸ್ಯ ರವಿ ಅವರನ್ನು ನೇಮಕ ಮಾಡಲು ಆಸಕ್ತಿ ಹೊಂದಿದ್ದಾರೆ.
ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಪೆಕ್ಸ್ ಬ್ಯಾಂಕ್‌ನ ಹಾಲಿ ಅಧ್ಯಕ್ಷರು, ಅವರನ್ನು ಕೆಳಗಿಳಿಸಿ ರವಿ ಅವರನ್ನು ತರಬೇಕು, ಅದು ಸಾಧ್ಯವಾಗದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಧುರೀಣ ರಾಜೇಂದ್ರ ಕುಮಾರ್, ಇಲ್ಲವೇ ಶಿವಮೊಗ್ಗದ ಮತ್ತೊಬ್ಬ ಸಹಕಾರಿ ಧುರೀಣ ಮಂಜುನಾಥ್ ಗೌಡ ಅವರಲ್ಲಿ ಒಬ್ಬರನ್ನು ಕೂರಿಸಬೇಕೆಂದು ಶಿವಕುಮಾರ್ ತೀರ್ಮಾನಿಸಿದ್ದಾರೆ.
ಬೇರೆ ಧುರೀಣರ ನೇಮಕ
ಶಿವಕುಮಾರ್ ಅವರ ತೀರ್ಮಾನವನ್ನು ರಾಜಣ್ಣ ಸಂರ್ಪೂಣ ತಳ್ಳಿಹಾಕಿ, ಅವರು ಕರೆದ ಸಭೆಗೂ ಹೋಗದೆ, ಬೆಳ್ಳಿ ಪ್ರಕಾಶ್ ಅವರನ್ನೇ ಮುಂದುವರೆಸೋಣ, ಅವರನ್ನು ಕಾಂಗ್ರೆಸ್‌ಗೆ ಕರೆ ತರೋಣ, ಬೇಡವೆಂದಾದರೆ, ಬೇರೆ ಧುರೀಣರನ್ನು ನೇಮಕ ಮಾಡೋಣ ಎಂದು ಪಟ್ಟು ಹಿಡಿದಿದ್ದಾರೆ.
ರಾಜಣ್ಣ ಮಾತಿಗೆ ಮುಖ್ಯಮಂತ್ರಿ ಬೆಂಬಲವೂ ಇದ್ದಂತಿದೆ, ಆದರೆ, ಶಿವಕುಮಾರ್ ಮಾತ್ರ ತಮ್ಮ ಹೋರಾಟ ಮುಂದುವರೆಸಿರುವುದಲ್ಲದೆ, ಎಐಸಿಸಿ ಬಾಗಿಲನ್ನೂ ತಟ್ಟಿದ್ದಾರೆ.
ಈ ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಲು ಸ್ವಾಮೀಜಿಗಳು ಸಭೆ ಕರೆದಿದ್ದರು, ಅದರಲ್ಲಿ ರಾಜಕೀಯ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಗೆ ಹೋಗಲು ಸಾಧ್ಯವಾಗಲಿಲ್ಲ
ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಶಿವಕುಮಾರ್ ಕರೆದಿದ್ದ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ನೇಮಕಾತಿಗೆ ಅದರ ಮಂಡಳಿ ಸದಸ್ಯರು ತೀರ್ಮಾನ ಕೈಗೊಳ್ಳಬೇಕು, ಅಲ್ಲಿ ಯಾರಿಗೆ ಬಹುಮತವಿದೆಯೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ.
ಹಾಲಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರಿಗೆ ಬೆಂಬಲ ಇಲ್ಲ ಎಂದಾದರೆ, ಮತ್ತೊಬ್ಬರು ಅಧಿಕಾರಕ್ಕೆ ಬರುತ್ತಾರೆ ಎಂದರು.