ಬೆಂಗಳೂರು:ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭಗಳಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಅಬಕಾರಿ ಇಲಾಖೆಯನ್ನೇ ಗುರಿಯಾಗಿಟ್ಟುಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ಪಾನಪ್ರಿಯರಿಗೆ ಖುಷಿ ನೀಡಿದ್ದಾರೆ.
ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಪ್ರೀಮಿಯಂ ಮದ್ಯಗಳ ಬೆಲೆಗಳನ್ನೇ ರಾಜ್ಯದಲ್ಲೂ ಪರಿಷ್ಕರಿಸುವುದಾಗಿ ತಮ್ಮ ಮುಂಗಡಪತ್ರದಲ್ಲಿ ಪ್ರಕಟಿಸಿದ್ದಾರೆ.
ಶೇ.30 ರಿಂದ 40ರಷ್ಟು ದರ ಕಡಿತ
ಕರ್ನಾಟಕಕ್ಕಿಂತ ಈ ರಾಜ್ಯಗಳಲ್ಲಿ ಮದ್ಯಗಳ ಬೆಲೆ ಶೇಕಡ 30ರಿಂದ 40ರಷ್ಟು ಕಡಿಮೆ ಇದೆ.
ಆ ರಾಜ್ಯಗಳಲ್ಲಿನ ದರಗಳನ್ನೇ ಇಲ್ಲಿಯೂ ನೀಡುವುದರಿಂದ ಈ ಮಾದರಿಯ ಪಾನೀಯಗಳು ಮಾರಾಟವಾಗಿ ರಾಜ್ಯ ಬೊಕ್ಕಸಕ್ಕೆ ಹೆಚ್ಚು ಸಂಪನ್ಮೂಲ ಕ್ರೋಡೀಕರಣವಾಗುತ್ತದೆ ಎಂಬ ಲೆಕ್ಕಾಚಾರ.
ಅಲ್ಲದೆ, ಹೊಸ ಬಾರ್ ಮತ್ತು ವೈನ್ ಶಾಪ್‌ಗಳನ್ನು ತೆರೆಯುವ ಪ್ರಸ್ತಾವವನ್ನೂ ಇಟ್ಟಿದ್ದಾರೆ.
ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಖಾಲಿ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಮಾಸಿಕ ಗೌರವಧನ ಹೆಚ್ಚಳ
ಒಂದೆಡೆ ಪಾನಪ್ರಿಯರಿಗೆ ಬಂಪರ್ ಕೊಡುಗೆ ನೀಡುವುದಾಗಿ ಪ್ರಸ್ತಾಪ ಮಾಡಿರುವ ಮುಖ್ಯಮಂತ್ರಿ ಅವರು, ಅಸಂಘಟಿತ ಕಾರ್ಮಿಕ ವರ್ಗಕ್ಕೂ ಒಂದಲ್ಲಾ ಒಂದು ರೀತಿ ಮಾಸಿಕ ಗೌರವಧನ ಹೆಚ್ಚಳ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮುಂದುವರಿಸಿರುವುದರ ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮುಜರಾಯಿ ದೇವಾಲಯ ಅರ್ಚಕರು, ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಾಸಾಶನ ಹೆಚ್ಚಳ ಮಾಡಿದ್ದಾರೆ.
ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿನ ಪ್ರವೇಶ ದರವನ್ನು 200 ರೂ.ಗಳಿಗೆ ಸೀಮಿತಗೊಳಿಸಿ ಸಿನೆಮಾ ಪ್ರಿಯರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ದೇವಾಲಯಗಳ ಅರ್ಚಕರಿಗೂ ಖುಷಿ
ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಅರ್ಚಕರಿಗೆ ನೀಡುತ್ತಿರುವ ಗೌರವಧನವನ್ನು ವಾರ್ಷಿಕ 60,000 ದಿಂದ 72,000 ರೂ.ಗೆ ಏರಿಸಿದ್ದಾರೆ.
ನಿವೃತ್ತಿ ಹೊಂದಿದ ಅಂತರರಾಷ್ಟ್ರೀಯ ಕುಸ್ತಿ ಪಟುಗಳ ಮಾಸಾಶನವನ್ನು 6,000 ರೂ.ಗೆ, ರಾಷ್ಟ್ರಮಟ್ಟದ ಕುಸ್ತಿ ಪಟುಗಳಿಗೆ 5,000 ಹಾಗೂ ರಾಜ್ಯಮಟ್ಟದ ಕುಸ್ತಿ ಪಟುಗಳಿಗೆ 4,500 ರೂ.ಗೆ ಹೆಚ್ಚಳ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಅನುಕ್ರಮವಾಗಿ 1,000 ಹಾಗೂ 750 ರೂ. ಹೆಚ್ಚಿಸಿದ್ದಾರೆ.
ಮಕ್ಕಳ ಪೌಷ್ಠಿಕ ಆಹಾರ
ಎಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಠಿಕ ಆಹಾರ ಮತ್ತು ಶಿಕ್ಷಣ ಪ್ರೋತ್ಸಾಹಿಸಲು ಪ್ರಸ್ತುತ ನೀಡುತ್ತಿರುವ ಮಾಸಿಕ ಸಹಾಯಧನವನ್ನು1,000 ದಿಂದ 2,000 ರೂ.ಗೆ ಹೆಚ್ಚಳ ಮಾಡಿದ್ದಾರೆ.
ಜಾನುವಾರುಗಳ ಆಕಸ್ಮಿಕ ಸಾವಿನ ಪರಿಹಾರವಾಗಿ ಹಸು-ಕರುಗಳ ಸಾವಿಗೆ ಪರಿಹಾರಧನವನ್ನು 15,000 ರೂ.ಗೆ, ಅದೇ ರೀತಿ ಕುರಿ ಮೇಕೆಗೆ 7,500 ರೂ.ಗೆ ಏರಿಕೆ ಮಾಡಲಾಗಿದೆ.
ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಿಸುವಲ್ಲಿ ವಾರದಲ್ಲಿ ಎರಡು ದಿನ ವಿತರಿಸಲಾಗುವ ಮೊಟ್ಟೆ ಮತ್ತು ಬಾಳೆ ಹಣ್ಣನ್ನು ವಾರದ ಆರು ದಿನಗಳೂ ನೀಡುವುದಾಗಿ ಪ್ರಕಟಿಸಿದ್ದಾರೆ.
ಅತಿಥಿ ಶಿಕ್ಷಕರ ಮಾಸಿಕ ಗೌರವಧನ
ಸರ್ಕಾರಿ ಪ್ರಾಥಮಿಕ ಮತ್ತು ಪೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಮಾಸಿಕ ಗೌರವಧನವನ್ನು 2,000 ರೂ. ಹೆಚ್ಚಿಸಲಾಗಿದೆ.
ಅದೇ ರೀತಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೂ 1,000 ರೂ.ಗಳ ಹೆಚ್ಚಳ ಮಾಡಲಾಗಿದೆ.
ಜನಪ್ರತಿನಿಧಿಗಳ ಕೂಗಿಗೂ ತಮ್ಮ ಮುಂಗಡಪತ್ರದಲ್ಲಿ ಮನ್ನಣೆ ನೀಡಿರುವ ಮುಖ್ಯಮಂತ್ರಿ ಅವರು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ತೆಗೆದಿರಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಮಾತೃ ಭಾಷೆ ಜೊತೆಗೆ ಆಂಗ್ಲ ಭಾಷೆ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗ ಆರಂಭಿಸುವುದಾಗಿ ಹೇಳಿದ್ದಾರೆ.