ಬೆಂಗಳೂರು:ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಿರಿಯ ಸಚಿವರೊಬ್ಬರ ಕೊರಳಿಗೆ ಉರುಳಾಗುವ ಲಕ್ಷಣಗಳು ಕಂಡುಬರುತ್ತಿವೆ.
ಚಿನ್ನ ಕಳ್ಳಸಾಗಣೆಯಲ್ಲಿ ಪ್ರಭಾವೀ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ದಿಮೆದಾರರು ಶಾಮೀಲಾಗಿದ್ದಾರೆಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನೀಡಿದ ಪ್ರಾಥಮಿಕ ವರದಿ ಆಧಾರದ ಮೇಲೆ ದೆಹಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಸ್ಫೋಟಕ ಮಾಹಿತಿ
ರನ್ಯಾ ರಾವ್ ಅವರನ್ನು ಡಿಆರ್‌ಐ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಕೆಲವು ಸ್ಫೋಟಕ ಮಾಹಿತಿ ನೀಡುತ್ತಿದ್ದಂತೆ ಸಂದೇಶ ರವಾನೆ ಮಾಡಿತು.
ಕೇಂದ್ರ ತನಿಖಾ ಸಂಸ್ಥೆಗಳು ತಕ್ಷಣವೇ ಡಿಆರ್‌ಐ ಕಸ್ಟಡಿಯಲ್ಲಿರುವ ರಾವ್ ಅವರನ್ನು ವಿಚಾರಣೆ ಮಾಡಿ ಮಾಹಿತಿ ಪಡೆದ ನಂತರ ಸಿಬಿಐ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತು.
ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿರುವುದರಿಂದ ಕರ್ನಾಟಕ ರಾಜಕೀಯದಲ್ಲೂ ಮುಂದಿನ ದಿನಗಳಲ್ಲಿ ಮಹತ್ತರ ತಿರುವು ಪಡೆದುಕೊಳ್ಳಲಿದೆ ಎನ್ನಲಾಗಿದೆ.
ದೆಹಲಿ ಸಿಬಿಐ ತನಿಖೆ
ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಮುಕ್ತ ಅವಕಾಶ ನೀಡದಿರುವ ಕರ್ನಾಟಕ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಗುಪ್ತಚರ ವಿಭಾಗ ನೀಡಿದ ದೂರು ದಾಖಲಿಸಿಕೊಂಡು ದೆಹಲಿ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ.
ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಇ.ಡಿ. ಕೂಡಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯಿಂದ, ಅಗೆದಷ್ಟೂ ದೊಡ್ಡ ದೊಡ್ಡ ಕುಳಗಳು ರನ್ಯಾ ರಾವ್ ಜೊತೆಗೆ ನಂಟು ಹೊಂದಿರುವುದು ಬೆಳಕಿಗೆ ಬರುತ್ತಿದೆ.
ಕಪ್ಪು ಹಣ ಬಿಳಿ
ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಚಿನ್ನ ಕಳ್ಳಸಾಗಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಡಿಆರ್‌ಐ, ಇ.ಡಿ. ಮತ್ತು ಸಿಬಿಐಗೆ ದೂರು ನೀಡಿತ್ತು.
ರನ್ಯಾ ರಾವ್ ಅವರಿಂದ ಕಳೆದ ನಾಲ್ಕು ದಿನಗಳ ಹಿಂದೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅನೇಕ ಮಾಹಿತಿಗಳನ್ನು ಕಲೆ ಹಾಕಿ ಅಪಾರ ಪ್ರಮಾಣದ ಚಿನ್ನ ಮತ್ತು ಕೋಟ್ಯಂತರ ರೂ.ಗಳನ್ನು ವಶಕ್ಕೆ ಪಡೆದಿದೆ.
ಆರೋಪಿ ನೀಡಿರುವ ಮಾಹಿತಿ, ಕೇಂದ್ರೀಯ ತನಿಖಾಧಿಕಾರಿಗಳನ್ನೇ ದಿಗ್ಭ್ರಮೆಗೊಳಿಸಿದೆ, ಈ ಜಾಲದ ಹಿಂದೆ ಪ್ರಭಾವೀ ರಾಜಕಾರಣಿಗಳು ಇರುವುದರಿಂದ ಸಿಬಿಐಗೆ ವಹಿಸಿ, ಚಿನ್ನ ಕಳ್ಳಸಾಗಣೆಯ ಮತ್ತಷ್ಟು ಕರ್ಮಕಾಂಡ ಬಯಲಿಗೆಳೆಯಲು ಇಲಾಖೆ ನಿರ್ಧರಿಸಿತು.
ರನ್ಯಾ ಮದುವೆ ಉಸ್ತುವಾರಿ
ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ಕಳೆದ ವರ್ಷವಷ್ಟೇ ರನ್ಯಾ ರಾವ್ ಮದುವೆ ನಡೆದಿತ್ತು.
ಮದುವೆ ನಡೆದ ಐದು ಗಂಟೆಗಳವರೆಗೂ ಈ ಪ್ರಭಾವೀ ಸಚಿವರು ಉಪಸ್ಥಿತರಿದ್ದು ಎಲ್ಲ ಉಸ್ತುವಾರಿ ನೋಡಿಕೊಂಡಿದ್ದರು.
ಅಷ್ಟೇ ಅಲ್ಲ, ಆರೋಪಿ ಹೇಳಿದ ಕೆಲಸಗಳನ್ನು ಸರ್ಕಾರದ ಮಟ್ಟದಲ್ಲಿ ಈ ವ್ಯಕ್ತಿ ಮಾಡಿಸಿಕೊಡುತ್ತಿದ್ದರು ಎಂಬುದೂ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.
ವಿದೇಶಗಳಿಗೆ ಪ್ರಯಾಣ
ರನ್ಯಾ ರಾವ್ ನಿರಂತರವಾಗಿ ವಿದೇಶಗಳಿಗೆ ಪ್ರಯಾಣ ಮಾಡುತ್ತಲೇ ಇದ್ದರು, ಇದನ್ನೇ ಆಧಾರವಾಗಿಟ್ಟುಕೊಂಡು ಡಿಆರ್‌ಐ ಅಧಿಕಾರಿಗಳು ತನಿಖೆ ನಡೆಸಿದಾಗ, ಆರೋಪಿಯು ಯೂರೋಪ್, ಅಮೆರಿಕ, ದುಬೈ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ತೆರಳಿರುವುದು ಬೆಳಕಿಗೆ ಬಂದಿದೆ.
ಅದರಲ್ಲೂ ನಿರಂತರವಾಗಿ ದುಬೈಗೆ ತೆರಳುತ್ತಿದ್ದುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತು, ಫೆಬ್ರವರಿ 2ರಿಂದ ಮಾರ್ಚ್ 3ರವರೆಗೆ ರಾವ್ ಐದು ಬಾರಿ ದುಬೈಗೆ ಭೇಟಿ ನೀಡಿದ್ದರು.
ಮಾರ್ಚ್ 3ರಂದು ದುಬೈನಿಂದ ಹಿಂತಿರುಗುತ್ತಿದ್ದಂತೆ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಆರೋಪಿಯಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನ ಮತ್ತು ನಗದನ್ನು ವಶ ಪಡಿಸಿಕೊಂಡರು.
ಪೋಲಿಸ್ ಅಧಿಕಾರಿ ಮಗಳು
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆಗೆ ಒಳಪಡಿಸದೆ, ಹಿರಿಯ ಪೋಲಿಸ್ ಅಧಿಕಾರಿ ಮಗಳೆಂದು ವಿಐಪಿ ಪ್ರವೇಶ ದ್ವಾರದಿಂದ ರನ್ಯಾ ರಾವ್ ಅವರನ್ನು ಸದಾಕಾಲ ಹೊರಗೆ ಕರೆತರುತ್ತಿದ್ದ ಪೋಲಿಸ್‌ನನ್ನು ಸಹಾ ಬಂಧಿಸಲಾಗಿದೆ.
ಆರೋಪಿಯನ್ನು ಕರೆತರಲು ಈತನಿಗೆ ಯಾರು ಸಂದೇಶ ಕೊಡುತ್ತಿದ್ದರು ಎಂಬ ಮಾಹಿತಿಯನ್ನು ತನಿಖಾ ತಂಡದ ಮುಂದೆ ಈತ ಬಿಡಿಸಿಟ್ಟಿದ್ದು, ಆ ಮಾಹಿತಿ ಕೆಲವು ಪ್ರಭಾವಿಗಳಿಗೆ ಮುಳುವಾಗಲಿದೆ.