ಬೆಂಗಳೂರು:ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಚಿವರು ಮತ್ತು ಅಧಿಕಾರಿಗಳ ಪಾತ್ರದ ಬಗ್ಗೆ ಕಾಂಗ್ರೆಸ್ ವರಿಷ್ಠರು ಮಾಹಿತಿ ಕೋರಿದ್ದಾರೆ.
ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿ ಉತ್ತರ ಬಯಸಿದ್ದಾರೆ.
ಸತ್ಯಾಸತ್ಯತೆ ತಿಳಿಯಲು
ಚಿನ್ನ ಕಳ್ಳಸಾಗಣೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು, ಇದರ ಸತ್ಯಾಸತ್ಯತೆ ತಿಳಿಯಲು ಎಐಸಿಸಿ ಬಯಸಿದ್ದು, ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆ ನಡೆಸಿ ವಾಸ್ತವಸ್ಥಿತಿಯ ಮಾಹಿತಿ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರುಗಳ ಪಾತ್ರ ಇದ್ದರೆ ಸಿಬಿಐ ತನಿಖೆ ಮಾಡಲಿ, ಸತ್ಯಾಸತ್ಯತೆ ಹೊರತರಲಿ ಎಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಚಿತ್ರ ನಟಿ ರನ್ಯಾ ರಾವ್ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿಬಿಐ ತನಿಖೆ
ಈ ಮೊದಲು ಯಾವುದೇ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿದರೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತಿತ್ತು, ರನ್ಯಾ ರಾವ್ ವಿಷಯದಲ್ಲಿ ನಮ್ಮ ಅನುಮತಿ ಕೇಳಿಲ್ಲ, ನಾವು ಕೂಡಾ ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ.
ಕೇಂದ್ರ ಸರ್ಕಾರದ ತನಿಖೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಆರೋಪಿಯು ಪೋಲಿಸ್ ವಾಹನದಲ್ಲಿ ಓಡಾಡಿರುವ ಬಗ್ಗೆ ನಮ್ಮ ಹಂತದಲ್ಲಿ ನಡೆಯಬೇಕಾದ ತನಿಖೆಯನ್ನು ನಾವು ಮಾಡುತ್ತೇವೆ ಎಂದರು.
ಚಿನ್ನ ಕಳ್ಳಸಾಗಣೆ ವರದಿ ಆಗಿರುವುದು ವಿಮಾನ ನಿಲ್ದಾಣದಲ್ಲಿ, ಕೇಂದ್ರ ಕಂದಾಯ ಗುಪ್ತಚರ ವಿಭಾಗದವರು ಕಾರ್ಯಾಚರಣೆ ನಡೆಸಿದ್ದಾರೆ.
ಯಾವುದೇ ಸಂಬಂಧ ಇಲ್ಲ
ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ, ಗುಪ್ತಚರ ಇಲಾಖೆ ಅಧಿಕಾರಿಗಳು ಕೇಂದ್ರಕ್ಕೆ ವರದಿ ನೀಡುತ್ತಾರೆ, ನಮಗಲ್ಲ.
ಹಾಗೆಂದು ಕಳ್ಳಸಾಗಣೆ ನಡೆದಿಲ್ಲ ಎಂದು ನಾನು ಹೇಳುತ್ತಿಲ್ಲ, ರನ್ಯಾ ರಾವ್ ಅವರ ತಂದೆ ಪೋಲಿಸ್ ಮಹಾನಿರ್ದೇಶಕರಾಗಿದ್ದಾರೆ, ಹಾಗಾಗಿ ಅವರು ಪೋಲಿಸ್ ವಾಹನದಲ್ಲಿ ಹೋಗಿ ಬರುತ್ತಿದ್ದರೆಂಬ ಮಾಹಿತಿ ಇದೆ, ಆ ಬಗ್ಗೆ ಇಲಾಖೆ ತನಿಖೆ ನಡೆಸುತ್ತದೆ ಎಂದರು.
ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿ, ಚಿತ್ರನಟಿ ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ, ನಮ್ಮ ದೇಶದ ಬೇರೆ ರಾಜ್ಯಗಳಿಗೂ ಕಳ್ಳಸಾಗಾಣಿಕೆಗೆ ಬೆಂಗಳೂರು ಕೇಂದ್ರ ಸ್ಥಾನವಾಗಿದೆಯೇ ಎಂಬ ಅನುಮಾನ ಬರುತ್ತಿದೆ, ಈಕೆಗೆ ಪೊಲೀಸರ ಪ್ರೋಟೋಕಾಲ್ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಸರ್ಕಾರ ಭಾಗಿಯಾಗಿದೆಯೇ
ಆರೋಪಿ ಜೊತೆಗೆ ಸಚಿವರ ಸಂಪರ್ಕ ಇರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ, ಸರ್ಕಾರ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ರನ್ಯಾ ಅವರ ತಂದೆ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ, ಹಾಗಾಗಿ ಪೊಲೀಸ್ ವಾಹನದಲ್ಲಿ ಹೋಗಿ, ಬರುತ್ತಿದ್ದರು ಎಂಬ ಮಾಹಿತಿ ಇದೆ, ಅದೂ ತನಿಖೆಯಾಗಲಿ, ಸಚಿವರ ಕೈವಾಡ ಬಗ್ಗೆಯೂ ಸಿಬಿಐ ತನಿಖೆ ಮಾಡಲಿ, ವರದಿಯಲ್ಲಿ ಸತ್ಯಾಂಶ ಕಂಡು ಬಂದರೆ ಮುಂದೆ ಏನಾಗಲಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ಗೃಹ ಸಚಿವರು ಮಾಹಿತಿ ಇಲ್ಲ ಎಂದು ಅಸಾಹಯಕತೆ ವ್ಯಕ್ತಪಡಿಸುವುದು ಸರಿಯಲ್ಲ, ಅಷ್ಟು ದೊಡ್ಡ ಪ್ರಮಾಣದ ಅಪರಾಧದ ಬಗ್ಗೆ ವಿಷಯವೇ ಗೊತ್ತಿಲ್ಲ ಎಂದರೆ ಇದನ್ನು ಒಪ್ಪಲು ಸಾಧ್ಯವಿಲ್ಲ, ಆಕೆ ಪೊಲೀಸರ ವಾಹನ ಬಳಸುತ್ತಿದರೂ ಅದರ ಕುರಿತು ತನಿಖೆಯನ್ನೂ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಬೇಕು, ಹಿರಿಯ ಅಧಿಕಾರ ಹಾಗೂ ಸಚಿವರ ಹೆಸರು ಕೇಳಿ ಬಂದಿರುವುದರಿಂದ ಕೇಂದ್ರ ತನಿಖಾ ಸಂಸ್ಥೆಗಳೇ ತನಿಖೆ ನಡೆಸುವುದು ಸೂಕ್ತ ಎಂದರು.