ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಏಳು ಭಾಗವಾಗಿಸಿ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹೋಳು ಮಾಡುವುದು, ಒಡೆದಾಳುವ ನೀತಿಯಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿಯಾಗಿದೆ, ಕಳೆದ 75 ವರ್ಷಗಳಿಂದ ದೇಶದಲ್ಲಿ ಇದನ್ನೇ ಮಾಡಿಕೊಂಡು ಬಂದಿದೆ ಎಂದಿದ್ದಾರೆ.
ಒಡೆದು ಅಳುವುದೇ ಕಾಂಗ್ರೆಸ್ ನೀತಿ
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಬಿಎಂಪಿಯನ್ನು ಛಿದ್ರ ಮಾಡುವ ಸರ್ಕಾರದ ನಡೆ ಖಂಡನೀಯ, ಒಡೆದು ಅಳುವುದೇ ಕಾಂಗ್ರೆಸ್ ನೀತಿ, ಅಂದು ಅಖಂಡ ಭಾರತ ಹೋಳು ಮಾಡಿತು, ಇಂದು ಬೆಂಗಳೂರು ಮಹಾನಗರ ಹೋಳು ಮಾಡುತ್ತಿದೆ ಎಂದಿದ್ದಾರೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಕಿತ್ತು ಹಾಕುವುದೇ ಕಾಂಗ್ರೆಸ್ ಸರ್ಕಾರದ ದುರುದ್ದೇಶವಾಗಿದೆ.
ಗ್ರೇಟರ್ ಬೆಂಗಳೂರು ಎನ್ನುವುದು ಹೆಸರಿಗಷ್ಟೇ, ಇದರ ಹಿಂದಿನ ಮರ್ಮ ’ಲೂಟರ್’ ಅಂದರೆ, ಕೊಳ್ಳೆ ಹೊಡೆಯುವುದಷ್ಟೇ.
ಲೂಟಿಯ ವಿಕೇಂದ್ರೀಕರಣ
ಬಿಬಿಎಂಪಿ ವಿಭಜನೆ ಅಧಿಕಾರ ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಲೂಟಿಯ ವಿಕೇಂದ್ರೀಕರಣ, ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್ ಘೋರಿ ಸಂಪದ್ಭರಿತ ಭಾರತವನ್ನು ಲೂಟಿ ಮಾಡಿದರು.
ಸಂಪದ್ಭರಿತ ಬೆಂಗಳೂರು ನಗರ ಲೂಟಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ, ಅವನು ನಗರದ ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಯಾರ ಹೆಸರನ್ನೂ ಹೇಳದೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.