ಬೆಂಗಳೂರು:ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ಪ್ರತ್ಯೇಕ ಎಫ್‌ಐಆರ್ ದಾಖಲಿಸಿವೆ.
ಕೇಂದ್ರ ಕಂದಾಯ ಗುಪ್ತಚರ ವಿಭಾಗ ನೀಡಿದ ಮಾಹಿತಿ ಆಧರಿಸಿ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡಿತ್ತು, ಇದೀಗ ರನ್ಯಾ ವಿರುದ್ಧ ಎಫ್‌ಐಆರ್ ದಾಖಲಿಸಿ, ಜೈಲಿನಲ್ಲಿರುವ ಅವರಿಂದ ಕೆಲವು ಮಾಹಿತಿ ಪಡೆದಿದೆ.
8 ಕಡೆಗಳಲ್ಲಿ ದಾಳಿ
ಹಣ ವರ್ಗಾವಣೆ ಆರೋಪದ ಮೇಲೆ ಇ.ಡಿ. ಆಕೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ರನ್ಯಾ ರಾವ್ ಮನೆ ಸೇರಿದಂತೆ ನಗರದ 8 ಕಡೆಗಳಲ್ಲಿ ದಾಳಿ ನಡೆಸಿ ತನಿಖೆ ಮುಂದುವರೆಸಿದೆ.
ರನ್ಯಾ ರಾವ್ ವಿರುದ್ಧ ಸಿಬಿಐ, ಶಿಕ್ಷಾರ್ಹ ಅಪರಾಧ ಒಳಸಂಚು, ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7 ಹಾಗೂ 12ರಡಿ ಎಫ್‌ಐಆರ್ ದಾಖಲಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ 7 ವರ್ಷ ಜೈಲು ಶಿಕ್ಷೆ, 12ರಡಿ 3ರಿಂದ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ.

ಪಿಸಿ ಕಾಯ್ದೆಯಡಿ ಪ್ರಕರಣ
ಸರ್ಕಾರಿ ಅಧಿಕಾರಿಗಳು ಈಕೆಗೆ ಸಹಕರಿಸಿರುವ ಸಂಶಯದ ಹಿನ್ನೆಲೆಯಲ್ಲಿ ಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಸರ್ಕಾರದ ಅಧಿಕಾರಿಗಳಲ್ಲದೆ, ಕಸ್ಟಮ್‌ನ ಹಿರಿಯ ಅಧಿಕಾರಿಗಳು ಒಳಸಂಚಿನಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಅಲ್ಲದೆ, ದೇಶದ ವಿವಿಧೆಡೆ ಸಿಂಡಿಕೇಟ್ ಇರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ಮಾಹಿತಿ ಲಭ್ಯವಾಗಿದ್ದು ಇದರಡಿಯೂ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಪ್ರೋಟೋಕಾಲ್ ಕೊಡಿಸಿದ್ದರು
ರನ್ಯಾ ತನಿಖಾ ತಂಡದ ಮುಂದೆ ನೀಡಿರುವ ಮಾಹಿತಿಯಂತೆ ಡಿಜಿಪಿ ರಾಮಚಂದ್ರ ರಾವ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ಕೊಡಿಸಿದ್ದರು.
ತಮ್ಮ ತಂದೆಯಿಂದ ಪ್ರೋಟೋಕಾಲ್ ಅಧಿಕಾರಿ ಬಸಪ್ಪ ಅಲಿಯಾಸ್ ಬಸವರಾಜುಗೆ ಕರೆ ಮಾಡಿಸಿ, ಮಗಳು ಮತ್ತು ಕುಟುಂಬದವರು ಬಂದಾಗ ಪ್ರೋಟೋಕಾಲ್ ನೀಡುವಂತೆ ಸೂಚಿಸಿದ್ದರಂತೆ.
ಅವರ ಸೂಚನೆಯಂತೆ ಈ ಹಿಂದೆ 3ರಿಂದ 4 ಬಾರಿ ರನ್ಯಾ ರಾವ್‌ಗೆ ಪ್ರೋಟೋಕಾಲ್ ನೀಡಲಾಗಿದೆ.
ಅಧಿಕಾರಿಗೆ ರನ್ಯಾ ಕರೆ
ಆದರೆ, ಈ ಬಾರಿ, ತನಗೆ ಪ್ರೋಟೋಕಾಲ್ ಬೇಕು ಎಂದು ಕರೆ ಮಾಡಿದ್ದ ರನ್ಯಾ ರಾವ್, ತಾನು ದುಬೈನಿಂದ ಬರುತ್ತಿದ್ದು, ಸಂಜೆ 6-20ಕ್ಕೆ ರೀಚ್ ಆಗುತ್ತೇನೆ, ತಾವು ಬನ್ನಿ ಎಂದು ಪ್ರೋಟೋಕಾಲ್ ಅಧಿಕಾರಿಗೆ ಕರೆ ಮಾಡಿದ್ದರು.
ರನ್ಯಾ ರಾವ್‌ಗೆ ಈ ಹಿಂದೆಯೂ ಪ್ರೋಟೋಕಾಲ್ ನೀಡಿದ್ದ ಬಸವರಾಜ್, ಈ ವೇಳೆ ಅಲ್ಲಿಯೇ ಕೆಲಸ ಮಾಡುವ ಇಂಟಲಿಜೆನ್ಸ್ ಅಧಿಕಾರಿ ಧನುಷ್‌ರನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದ.
ದನುಷ್ ಬಾ ಒಳಗೆ ಹೋಗಿ ಬರುವ ಎಂಬುದಾಗಿ ಹೇಳಿ ಬಸವರಾಜ್ ಕರೆದುಕೊಂಡು ಹೋಗಿದ್ದರಾದರೂ, ಇವರಿಬ್ಬರಿಗೂ ಚಿನ್ನ ಕಳ್ಳಸಾಗಣೆ ಬಗ್ಗೆ ಮಾಹಿತಿ ಇರಲಿಲ್ಲವಂತೆ.
ರನ್ಯಾ ರಾವ್‌ಗೆ ಮಾಹಿತಿ
ವಿಮಾನ ನಿಲ್ದಾಣದಿಂದ ಚಿನ್ನ ಸಹಿತ ಹೊರ ಬಂದ ಬಳಿಕ ಏನು ಮಾಡಬೇಕಿತ್ತು ಎಂಬ ಬಗ್ಗೆ ರನ್ಯಾ ರಾವ್‌ಗೆ ಮಾಹಿತಿ ನೀಡಲಾಗಿತ್ತು.
ಚಿನ್ನ ತೆಗೆದುಕೊಂಡು ಟೋಲ್‌ಗೇಟ್ ಬಳಿಗೆ ಪೊಲೀಸ್ ಕಾರ್‌ನಲ್ಲಿ ಬರಬೇಕು, ನಂತರ ಸಿಗ್ನಲ್ ಪಾಸ್ ಮಾಡಿದ ಮೇಲೆ ಸರ್ವಿಸ್ ರೋಡ್‌ನಲ್ಲಿ ಆಟೋ ಹತ್ತಬೇಕು, ಚಿನ್ನವನ್ನು ಆಟೋದಲ್ಲಿಯೇ ಇಟ್ಟು ಹೋಗಬೇಕು ಎಂಬ ನಿರ್ದೇಶನವಿತ್ತು.
ಆಟೋ ನಂಬರ್ ಸಹ ನೀಡಿರಲಿಲ್ಲಾ, ಬದಲಿಗೆ ಆಟೋದವನೇ ಖುದ್ದು ಸಿಗ್ನಲ್ ಪಾಸ್ ಮಾಡಿ, ಆಟೋ ಏರಿ ಗೋಲ್ಡ್ ಇಡುವಂತೆ ಸೂಚಿಲಾಗಿತ್ತು.
ಇಷ್ಟಕ್ಕೆ ತಮ್ಮ ಟಾಸ್ಕ್ ಮುಗಿಯುತ್ತಿತ್ತು ಎಂದು ತನಿಖಾಧಿಕಾರಿ ಮುಂದೆ ರನ್ಯಾ ರಾವ್ ಹೇಳಿಕೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
