ಬೆಂಗಳೂರು:ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿರುವುದರಿಂದ ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಡಿ ಹೊಗಳಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ವಿಧಾನಸಭೆಯಲ್ಲೇ, ತಾವು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ ಎಂಬುದಾಗಿ ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಇಂದಿನ ಮಾತುಗಳು ಅಚ್ಚರಿ ಮೂಡಿಸಿವೆ.
ಟ್ವೀಟ್ ಮೂಲಕ ಶುಭ ಹಾರೈಕೆ
ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪಂಚತಾರಾ ಹೋಟೆಲ್‌ನಲ್ಲಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ, ಇಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರವನ್ನು ಮನೆ, ಮನಗಳಿಗೆ ತಲುಪಿಸಲು ನನ್ನ ಹೆಗಲಿಗೆ ಹೆಗಲಾಗಿ ನಿಂತವರು ಡಿಕೆಶಿ ಎಂದಿದ್ದಾರೆ.
ವಿಪಕ್ಷಗಳ ಅಪಪ್ರಚಾರವನ್ನು ಮೆಟ್ಟಿನಿಂತು ನಮ್ಮ ಸಾಧನೆಗಳು ರಾಜ್ಯದ ಮನೆ ಮಾತಾಗಬೇಕು, ಇದಕ್ಕಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡೋಣ ಎಂದಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣು
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಬಣದ ಸಚಿವರು, ಶಾಸಕರು, ಅಡ್ಡಗಾಲಾಗಿದ್ದಾರೆ.
ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಿ ಎಂದು ಎಐಸಿಸಿ ವರಿಷ್ಠರು ನೀಡಿರುವ ಸಂದೇಶದ ಹಿನ್ನೆಲೆಯಲ್ಲಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ ನೆನಪಿನಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಿದ್ದರು.
ಮುಂಬರುವ ಜುಲೈ ಮಧ್ಯಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಐದು ವರ್ಷ ಪೂರ್ಣಗೊಳ್ಳಲಿದೆ, ಆದರೆ, ಅವರು, ಅಧ್ಯಕ್ಷರಾಗಿ ಬಂದ ಆದೇಶ ಪತ್ರದ ದಿನಾಂಕ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಗಾದಿಗೇರಲು ವೇದಿಕೆ ನಿರ್ಮಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಖುದ್ದಾಗಿ ಆಹ್ವಾನ
ಶಿವಕುಮಾರ್ ಅವರೇ ಖುದ್ದಾಗಿ ಮುಖ್ಯಮಂತ್ರಿ, ಸಂಪುಟದ ಸಚಿವರು, ಪಕ್ಷದ ಸಂಸದರು ಹಾಗೂ ಶಾಸಕರಿಗೆ ಆಹ್ವಾನ ನೀಡಿದ್ದರು.
ಈ ಆಹ್ವಾನಕ್ಕೆ ಬಹುತೇಕರು ಹಾಜರಾಗಿದ್ದರೂ, ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಸಚಿವರು ಹಾಗೂ 40ಕ್ಕೂ ಹೆಚ್ಚು ಶಾಸಕರು ಗೈರುಹಾಜರಾಗಿದ್ದರು.
ಶಿವಕುಮಾರ್ ಗುರುವಾರ ಔತಣಕೂಟ ಏರ್ಪಡಿಸುವುದಕ್ಕೂ ಮುನ್ನ ತಮ್ಮ ಆಪ್ತ ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಹಾಗೂ ಜೆಡಿಎಸ್‌ನ ಶರಣಗೌಡ ಕಂದಕೂರು ನಾಯಕತ್ವದಲ್ಲಿ ಕಳೆದ ಮಂಗಳವಾರ ಪಂಚತಾರಾ ಹೋಟೆಲ್ ಒಂದರಲ್ಲಿ ಬೋಜನಕೂಟ ಏರ್ಪಡಿಸಿದ್ದರು.
ಮಂಡ್ಯ ಶಾಸಕರಿಂದ ಪೂರ್ಣ ವೆಚ್ಚ
ಬಸವರಾಜ್ ಶಿವಗಂಗಾ ಕರೆದ ಔತಣಕೂಟದಲ್ಲಿ 57 ಶಾಸಕರು ಭಾಗಿಯಾಗಿದ್ದರು, ಕಾಂಗ್ರೆಸ್ ಅಲ್ಲದೆ, ಬೇರೆ ಪಕ್ಷದ ಶಾಸಕರೂ ಉಪಸ್ಥಿತರಿದ್ದರು, ಇದರ ಪೂರ್ಣ ವೆಚ್ಚವನ್ನು ಮಂಡ್ಯ ಶಾಸಕರೊಬ್ಬರು ಭರಿಸಿದ್ದರು.
ಶಿವಕುಮಾರ್ ಬೆಂಬಲಿಗರು ಔತಣಕೂಟ ಏರ್ಪಡಿಸಿದ್ದರು ಎಂಬ ಮಾಹಿತಿ ಸಿದ್ದರಾಮಯ್ಯ ಅವರಿಗೆ ತಲುಪುತ್ತಿದ್ದಂತೆ, ಬುಧವಾರ ವಿಧಾನಸಭೆಯಲ್ಲೇ, ಯಾವುದೋ ಒಂದು ವಿಷಯವನ್ನು ಮುಂದಿಟ್ಟುಕೊಂಡು ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಟಾಂಗ್ ನೀಡಿದ್ದರು.