ಬೆಂಗಳೂರು:ನಾನು ಚಿನ್ನ ಕಳ್ಳಸಾಗಣೆ ಮಾಡಿಲ್ಲ, ನನ್ನ ಮೇಲೆ ಬಲವಂತವಾಗಿ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಚಿತ್ರನಟಿ ರನ್ಯಾ ರಾವ್ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ನಾಲ್ಕು ಪುಟಗಳ ದೂರನ್ನು ಗುಪ್ತಚರ ಎಸ್‌ಪಿ ಮೂಲಕ ಕೇಂದ್ರ ಅಧಿಕಾರಿಗೆ ಜೈಲಿನಿಂದಲೇ ರವಾನೆ ಮಾಡಿದ್ದಾರೆ.
ವಿಮಾನದಲ್ಲೇ ಹಲ್ಲೆ
ವಿಮಾನದಲ್ಲೇ ತನ್ನ ಮೇಲೆ ಹಲ್ಲೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಮುಖದ ಮೇಲೆ ಹಲ್ಲೆ ನಡೆಸಿದರು.
ಅಲ್ಲದೆ, ನ್ಯಾಯಾಧೀಶರ ಮುಂದೆ ಹಿಂಸೆ ನೀಡಿದರೆಂದು ಹೇಳಿಕೆ ಕೊಟ್ಟರೆ ನಿಮ್ಮ ತಂದೆಯ ಹೆಸರನ್ನೂ ಈ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು.
ನಿಮ್ಮ ತಂದೆ ಈ ಪ್ರಕರಣದಲ್ಲಿ ಶಾಮೀಲಾಗಿಲ್ಲ ಎಂಬುದು ತಿಳಿದಿದೆ, ಆದರೂ ಅವರ ಹೆಸರನ್ನು ಪ್ರಕರಣದಲ್ಲಿ ಎಳೆದು ತರುವುದಾಗಿ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲ-ಸಲ್ಲದ ಆರೋಪ
ದುಬೈನಿಂದ ನಾನು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಲವಂತವಾಗಿ ಬಂಧಿಸಿ, ಇಲ್ಲ-ಸಲ್ಲದ ಆರೋಪ ಹೊರಿಸಿದ್ದಾರೆ.
ನಾನು ಚಿನ್ನವನ್ನೇ ತಂದಿಲ್ಲ, ನಾನು ಅಮಾಯಕಿ, ನನ್ನ ಮೇಲೆ ಆರೋಪ ಮಾಡಲಾಗಿದೆ, ಡಿಆರ್‌ಐ ಅಧಿಕಾರಿಗಳು ಯಾವ ಉದ್ದೇಶದಿಂದ ನನ್ನ ಮೇಲೆ ಆರೋಪ ಹೊರಿಸಿ ಬಲವಂತವಾಗಿ ಹೇಳಿಕೆ ಪಡೆದುಕೊಂಡು, ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ.
ನ್ಯಾಯಾಲಯಕ್ಕೆ ನನ್ನನ್ನು ಹಾಜರುಪಡಿಸುವವರೆಗೂ ಅಧಿಕಾರಿಗಳು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ, ಅಲ್ಲದೆ, ನನ್ನ ಮುಖ ಸೇರಿದಂತೆ ಹತ್ತರಿಂದ 15 ಬಾರಿ ದೈಹಿಕ ಹಲ್ಲೆ ನಡೆಸಿದ್ದಾರೆ.
ನಾನು ನಿರಪರಾಧಿ
ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ, ನಾನು ನಿರಪರಾಧಿ, ದುಬೈನಿಂದ ಬೆಂಗಳೂರಿಗೆ ಹಿಂತಿರುಗುವವರೆಗೆ ಏನು ನಡೆದಿದೆ ಎಂಬುದೇ ನನಗೆ ತಿಳಿಯದು.
ನನ್ನ ಮೇಲೆ 14 ಕೆ.ಜಿ.ಗೂ ಹೆಚ್ಚು ಚಿನ್ನ ಕಳ್ಳಸಾಗಣೆ ಆರೋಪ ಮಾಡಲಾಗಿದೆ, ದುಬೈ ವಿಮಾನ ನಿಲ್ದಾಣದಲ್ಲೇ ತಪಾಸಣೆಗೆ ಒಳಗಾಗಿದ್ದೇನೆ, ಅಲ್ಲಿ, ಇಲ್ಲದ ಚಿನ್ನ ಇಲ್ಲಿ ಹೇಗೆ ನನ್ನ ಬಳಿ ಇರಲು ಸಾಧ್ಯ.
ಮೂರು ದಿನಗಳ ಕಾಲ ಅಧಿಕಾರಿಗಳ ವಶದಲ್ಲಿದ್ದಾಗ, ನನಗೆ ಭಾರೀ ಕಿರುಕುಳ ಮತ್ತು ಹಿಂಸೆ ನೀಡಿ, ಬಲವಂತವಾಗಿ ಹೇಳಿಕೆಗಳಿಗೆ ಹಾಗೂ ಸುಮಾರು 40 ಬಿಳಿ ಕಾಗದಗಳ ಮೇಲೆ ಸಹಿ ಹಾಕಿಸಿಕೊಂಡಿದ್ದು, ಅದಕ್ಕೂ ನನಗೂ ಸಂಬಂಧ ಇಲ್ಲ.
ವ್ಯವಸ್ಥಿತ ಪಿತೂರಿ ಸಂಶಯ
ಅಧಿಕಾರಿಗಳು ವ್ಯವಸ್ಥಿತವಾಗಿ ನನ್ನ ವಿರುದ್ಧ ಪಿತೂರಿ ನಡೆಸಿರುವ ಸಂಶಯ ಬರುತ್ತಿದೆ, ಇವರುಗಳು ನನ್ನನ್ನು ಏತಕ್ಕೆ ಗುರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ.
ವಿಚಾರಣೆ ಹೆಸರಿನಲ್ಲಿ ನನಗೆ ಚಿತ್ರಹಿಂಸೆ ನೀಡಿದ್ದು, ಮೂರು-ನಾಲ್ಕು ದಿನ ಸರಿಯಾಗಿ ಆಹಾರ ನೀಡದೆ, ನಿದ್ರೆಯನ್ನೂ ಮಾಡಲು ಬಿಡದೆ ಹಿಂಸೆ ಮಾಡಿದ್ದಾರೆ.
ಕೆಳಹಂತದ ಅಧಿಕಾರಿಗಳ ವರ್ತನೆ ಮತ್ತು ನಡತೆ ಬಗ್ಗೆ ನೀವೇ ತನಿಖೆ ನಡೆಸಿ, ನನ್ನನ್ನು ಬಂಧಮುಕ್ತಗೊಳಿಸಬೇಕು ಎಂಬುದಾಗಿ ಮನವಿ ಮಾಡಿದ್ದಾರೆ.
ನಾಲ್ಕು ಪುಟಗಳ ಪತ್ರದಲ್ಲಿ ಎಲ್ಲಿಯೂ ತಮ್ಮ ಸಾಕುತಂದೆ ಡಿಜಿಪಿ ರಾಮಚಂದ್ರ ರಾವ್ ಹೆಸರನ್ನು ರನ್ಯಾ ರಾವ್ ಪ್ರಸ್ತಾಪಿಸಿಲ್ಲ.