ಬೆಂಗಳೂರು:ರಾಜ್ಯಾದ್ಯಂತ ಹಬ್ಬಿರುವ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸರು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯ ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ ಕಾರ್ಯ ಎಂದಿದ್ದಾರೆ.
ಯುವಜನರ ಬದುಕಿಗೆ ಮಾರಕ
ಸಾವಿರಾರು ಯುವಜನರ ಬದುಕಿಗೆ ಮಾರಕವಾಗಲಿದ್ದ ಸುಮಾರು 75 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 37 ಕೆ.ಜಿ. ಎಂಡಿಎಂಎ ಮಾದಕ ದ್ರವ್ಯ ವಶ ಪಡಿಸಿಕೊಳ್ಳುವ ಮೂಲಕ ಬಹುದೊಡ್ಡ ಅಪಾಯವನ್ನು ನಮ್ಮ ಪೊಲೀಸರು ನಿವಾರಿಸಿದ್ದಾರೆ.

ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟು, ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದೇವೆ.
ಕೆಲವು ತಿಂಗಳ ಹಿಂದೆಷ್ಟೇ ಮಂಗಳೂರಿಗೆ ತಾವು ಭೇಟಿ ನೀಡಿದ್ದ ವೇಳೆ, ಡ್ರಗ್ಸ್ ಹಾವಳಿ ತಡೆಗಟ್ಟಿ ಸ್ವಸ್ಥ ಪರಿಸರ ಕಟ್ಟಿಕೊಡುವ ವಾಗ್ದಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ನೀಡಿದ್ದೆವು, ಇದರ ಪ್ರಯತ್ನದ ಭಾಗವಾಗಿ ಬಹುದೊಡ್ಡ ಡ್ರಗ್ಸ್ ಜಾಲವೊಂದನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.